ವೇತನ ಹೆಚ್ಚಳದ ಕನಸು ಕಂಡಿದ್ದ ಪೊಲೀಸರ ಆಸೆಗೆ ತಣ್ಣೀರು

Public TV
2 Min Read
CM POLICE

– ಔರಾದ್ಕರ್ ವರದಿ ಜಾರಿಗೆ ಮತ್ತೆ ಕಣ್ಣಾಮುಚ್ಚಾಲೆ

ಬೆಂಗಳೂರು: ವೇತನ ಹೆಚ್ಚಳದ ಕನಸು ಕಂಡಿದ್ದ ರಾಜ್ಯ ಪೊಲೀಸರ ಆಸೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ತಣ್ಣೀರು ಎರಚಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ನಾಡಹಬ್ಬ ದಸರಾ ವೇಳೆ ರಾಜ್ಯ ಪೊಲೀಸರಿಗೆ ವಿಶೇಷ ಉಡುಗೊರೆ ನೀಡಲಾಗುತ್ತಿದೆ. ಔರಾದ್ಕರ್ ಸಮಿತಿ ವರದಿಯನ್ನು ಮುಂದಿನ ತಿಂಗಳಿಂದ ಅನುಷ್ಠಾನಕ್ಕೆ ತರಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ವಿಚಾರವಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದರು.

ಗೃಹ ಸಚಿವರ ಹೇಳಿಕೆ ನಿಟ್ಟಿನಲ್ಲಿ ಮೂರು ದಿನಗಳ ಹಿಂದೆಯಷ್ಟೇ ವೇತನ ಪರಿಷ್ಕರಣೆಗೆ ಆದೇಶಿಸಿ ಡಿಜಿ ಐಜಿಪಿ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈಗ ವೇತನ ಪರಿಷ್ಕರಣೆಗೆ ಆದೇಶದ ಸುತ್ತೋಲೆಗೆ ತಡೆ ನೀಡಿ ಆಡಳಿತ ವಿಭಾಗದ ಎಡಿಜಿಪಿ ಸಲೀಂ ಅವರು ಆದೇಶ ಪ್ರಕಟಿಸಿದ್ದಾರೆ. ವೇತನ ಪರಿಷ್ಕರಣೆ ಸಂಬಂಧ ಸರ್ಕಾರದಿಂದ ಆದೇಶ ಬರುವರೆಗೂ ಯಾವುದೇ ಕ್ರಮ ಕೈಗೊಳ್ಳದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೂಲಕ ಪೊಲೀಸರಿಗೆ ಸರ್ಕಾರ ನಿರಾಸೆ ಮಾಡಿದೆ. ಆರ್ಥಿಕ ಇಲಾಖೆ ಕೊಕ್ಕೆ ಹಾಕಿದ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟವಾಗಿದೆ ಎನ್ನಲಾಗುತ್ತಿದೆ.

cm police

ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ವೇಳೆ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆಗ ಪೊಲೀಸರು ಭಾರೀ ಭದ್ರತೆ ಒದಗಿಸಿರುವ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‍ನಲ್ಲಿ ಔರಾದ್ಕರ್ ವರದಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು.

ದೋಸ್ತಿ ಸರ್ಕಾರದ ವಿಶ್ವಾಸಮತಯಾಚನೆಗೂ ಮುನ್ನ ಅಂದಿನ ಸಿಎಂ ಕುಮಾರಸ್ವಾಮಿ ಅವರು ರಾಘವೇಂದ್ರ ಔರಾದ್ಕರ್ ಶಿಫಾರಸಿನಂತೆ ವೇತನ ಹೆಚ್ಚಳಕ್ಕೆ ಕುಮಾರಸ್ವಾಮಿ ಅಧಿಸೂಚನೆ ಹೊರಡಿಸಿದ್ದರು. ಕಳೆದ ಆಗಸ್ಟ್ 1ರಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು ಎಂದು ಆದೇಶ ಹೊರಡಿಸಿದ್ದರು. ಸಿಎಂ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಬಳಿಕ ದೋಸ್ತಿ ಸರ್ಕಾರ ಕೊನೆ ಕ್ಷಣದಲ್ಲಿ ಹೊರಡಿಸಿದ್ದ ಎಲ್ಲ ಆದೇಶಗಳನ್ನು ರದ್ದು ಪಡಿಸಿತ್ತು. ಹೀಗಾಗಿ ಪೊಲೀಸರಿಗೆ ವೇತನ ಹೆಚ್ಚಳವಾಗಿರಲಿಲ್ಲ.

police salary

ಎಷ್ಟು ಏರಿಕೆಯಾಗಬಹುದು?
ಔರಾದ್ಕರ್ ವರದಿ ಅನ್ವಯ ನೂತನ ವೇತನ ಪರಿಷ್ಕಣೆಯಿಂದ ಪೊಲೀಸ್ ರಿಸರ್ವ್ ಕಾನ್‍ಸ್ಟೆಬಲ್ 23,500ರಿಂದ 47,650 ರೂ. ಆಗಲಿದೆ. ಹೆಡ್ ಕಾನ್‍ಸ್ಟೇಬಲ್‍ಗೆ 27,650ದಿಂದ 52,650 ರೂ. ಏರಿಕೆಯಾಗಲಿದೆ. ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರಿಗೆ 30,350 ದಿಂದ 58,250 ರೂ. ವೇತನ ಹೆಚ್ಚಲಿದೆ. ಇನ್ಸ್‍ಪೆಕ್ಟರ್ಗೆ 43,100ರಿಂದ 83,900 ರೂ., ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 70,850ದಿಂದ 1,07,100 ರೂ. ಏರಿಕೆ ಆಗಲಿದೆ. ಈ ನೂತನ ವೇತನವು ಆಗಸ್ಟ್ 1 ರಿಂದ ಅನ್ವಯವಾಗಲಿದೆ ಎನ್ನಲಾಗಿದೆ.

ಈಗೀನ ಪೇ ಸ್ಕೇಲ್ ಪ್ರಕಾರ ಪೊಲೀಸ್ ಕಾನ್‍ಸ್ಟೇಬಲ್, ರಿಸರ್ವ್ ಕಾನ್ಸ್ ಟೇಬಲ್‍ಗೆ 12,500ದಿಂದ 24,000 ರೂ., ಹೆಡ್ ಕಾನ್ಸ್‍ಸ್ಟೇಬಲ್‍ಗೆ 14,559ರಿಂದ 26,700 ರೂ., ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ 16,000ದಿಂದ 29,600 ರೂ., ಇನ್ಸ್‍ಪೆಕ್ಟರ್ 22,800ರಿಂದ 43,200 ರೂ., ಹಾಗೂ ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 38,100-55,200 ರೂ. ಇದೆ.

Share This Article
Leave a Comment

Leave a Reply

Your email address will not be published. Required fields are marked *