ಬೆಂಗಳೂರು: ಟಗರು ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಅವರಿಂದ ಡಾಲಿ ಅಂತಲೇ ಕರೆಸಿಕೊಳ್ಳುತ್ತಿರುವವರು ಧನಂಜಯ್. ಒಂದು ಪಾತ್ರವೇ ಸೃಷ್ಟಿಸಿದ ಅದ್ಭುತಗಳಿಗೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಉದಾಹರಣೆಗಳಿವೆ. ಅದಕ್ಕೆ ತಾಜಾ ಉದಾಹರಣೆಯಂತಿರುವ ಡಾಲಿ ಅಭಿಮಾನ ದಕ್ಕಿಸಿಕೊಂಡಿರೋ ಪರಿ ನಿಜಕ್ಕೂ ಅಚ್ಚರಿ!
ಹೀಗಿರುವಾಗ ಅಭಿಮಾನಿಗಳ ಪಾಲಿಗೆ ಧನಂಜಯ್ ಹುಟ್ಟುಹಬ್ಬ ನಿಜಕ್ಕೂ ಹಬ್ಬವಾಗದಿರಲು ಹೇಗೆ ಸಾಧ್ಯ? ಧನಂಜಯ್ ಹುಟ್ಟಹಬ್ಬವನ್ನು ಈ ಬಾರಿ ರಾಜ್ಯಾದ್ಯಂತ ಡಾಲಿ ಡೇ ಆಗಿ ಆಚರಿಸಲು ಸಮಸ್ತ ಅಭಿಮಾನಿ ಬಳಗ ನಿರ್ಧರಿಸಿದೆ!
ಈ ಡಾಲಿ ಡೇಯನ್ನು ಸಾರ್ಥಕವಾಗಿ ಆಚರಿಸಲು ಧನಂಜಯ್ ಅವರ ಅಭಿಮಾನಿ ಬಳಗ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಇಂಥಾ ತಯಾರಿಯೊಂದಿಗೆ ಅಭಿಮಾನಿಗಳು ಆಗಸ್ಟ್ 23ಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಡಾಲಿ ಡೇ ಆಚರಣೆಯ ರೂಪುರೇಷೆ ಏನು ಎಂಬುದನ್ನು ಅಭಿಮಾನಿಗಳೆಲ್ಲ ಗೌಪ್ಯವಾಗಿಟ್ಟಿದ್ದಾರೆ. ಖುದ್ದು ಧನಂಜಯ್ ಕೂಡಾ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ!
ಧನಂಜಯ್ ಅವರ ಪಾಲಿಗೂ ಈ ಹುಟ್ಟುಹಬ್ಬ ವಿಶೇಷ. ಟಗರು ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ ಕ್ಷಣದಿಂದಲೇ ಅವರ ಲಕ್ಕು ಕುದುರಿಕೊಂಡಿದೆ. ಕೈ ತುಂಬಾ ಅವಕಾಶ, ಭರಪೂರವಾದ ಅಭಿಮಾನಗಳಿಂದ ಅವರು ಖುಷಿಗೊಂಡಿದ್ದಾರೆ. ಅಂತೂ ಈ ಬಾರಿ ಡಾಲಿ ಡೇ ಆಗಿ ಆಚರಿಸಲ್ಪಡುತ್ತಿರುವ ಧನಂಜಯ್ ಹುಟ್ಟುಹಬ್ಬದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ!