ಬೆಂಗಳೂರು: CL-7 ಮತ್ತು ಮೈಕ್ರೋಬ್ರೆವರಿ ಸನ್ನದಿಗೆ 2.30 ಕೋಟಿ ರೂ. ಲಂಚ ಕೇಳಿದ್ದ ಅಬಕಾರಿ ಇಲಾಖೆಯ ಡಿಸಿ ಸೇರಿ ಮೂವರು ಲೋಕಾ ಬಲೆಗೆ ಬಿದ್ದ ಪ್ರಕರಣ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಇನ್ನೊಂದು ಹಳೆಯ ಪ್ರಕರಣವೂ ಮುನ್ನೆಲೆಗೆ ಬಂದಿದ್ದು, ಜೆಡಿಎಸ್ ಶಾಸಕ ಹೆಚ್‌ಟಿ ಮಂಜು (HT Manju) ದೂರಿನ ಬಗ್ಗೆ ಎಚ್ಚರಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶಾಸಕ ಹೆಚ್‌ಟಿ ಮಂಜು ದೂರು ಕೊಟ್ಟಿದ್ದರು. ಈಗ ಮತ್ತೆ ಈ ಸಂಬಂಧ ನೆನಪಿಸಿದ್ದು, ಕ್ರಮ ಕೈಗೊಳ್ಳದಿದ್ರೆ ರಾಜ್ಯಪಾಲರ ಮೊರೆ ಹೋಗೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: CL-7 ಲೈಸೆನ್ಸ್‌ಗೆ ಲಂಚಕ್ಕೆ ಬೇಡಿಕೆಯಿಟ್ಟ ಕೇಸ್ – ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ
ಆರೋಪ ಏನು?
ಅಬಕಾರಿ ಇಲಾಖೆಯಲ್ಲಿ ಸನ್ನದು ಮಂಜೂರಿಗೆ ಲಂಚದ ಬೇಡಿಕೆಯಿಟ್ಟಿದ ಆರೋಪದ ಆಡಿಯೋ ವೈರಲ್ ಆಗಿತ್ತು. ಲೈಸೆನ್ಸ್ ಪಡೆಯಲು ಅಬಕಾರಿ ಸಚಿವರನ್ನು ಹಾಗೂ ಅವರ ಪುತ್ರನನ್ನು ಹೋಗಿ ಕಾಣಬೇಕೆಂದು ಅಬಕಾರಿ ಅಧಿಕಾರಿಯೊಬ್ರು ಈ ಆಡಿಯೋ ಸಂಭಾಷಣೆಯಲ್ಲಿ ಹೇಳಿದ್ದಾರೆ. ಅಬಕಾರಿ ಸಚಿವರು ಹಾಗೂ ಅವರ ಪುತ್ರನ ಹೆಸರು ಬಂದಿರೋ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಕೋರಿ ಸಿಎಂ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ಶಾಸಕ ಹೆಚ್‌ಟಿ ಮಂಜು ದೂರು ಸಲ್ಲಿಕೆ ಮಾಡಿದ್ದರು.
ಈ ದೂರಿಗೆ ತಕ್ಷಣ ಸ್ಪಂದಿಸಿ ಅಬಕಾರಿ ಇಲಾಖೆ ಆಯುಕ್ತರಿಗೆ ಕಳೆದ ಡಿಸೆಂಬರ್‌ನಲ್ಲೇ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ ಬರೆದಿದ್ದರು. ಪ್ರಕರಣದ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಶಾಲಿನಿ ರಜನೀಶ್ ಸೂಚಿಸಿದ್ದರು. ಜೊತೆಗೆ, ಈವರೆಗೆ ಕೈಗೊಂಡಿರುವ ಕ್ರಮಗಳ ವಿವರವನ್ನು ಸಲ್ಲಿಸುವಂತೆ ಆಯುಕ್ತರಿಗೆ ಶಾಲಿನಿ ರಜನೀಶ್ ನಿರ್ದೇಶನ ಕೊಟ್ಟಿದ್ರು. ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರನ ಮೇಲೆಯೇ ಆರೋಪ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಗಮನ ಸೆಳೆದಿದೆ.
ಆಡಿಯೋದಲ್ಲಿ ಏನಿದೆ?
ವೈರಲ್ ಆಗಿದ್ದ ಆಡಿಯೋದಲ್ಲಿ ಅಬಕಾರಿ ಸನ್ನದು ಮಂಜೂರು ಮಾಡುವ ವಿಚಾರವಾಗಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಸಂಭಾಷಣೆಯ ಮಧ್ಯೆ ಸಚಿವ ತಿಮ್ಮಾಪುರ ಅವರ ಪುತ್ರನ ಹೆಸರು ಬಳಕೆಯಾಗಿದ್ದು, ಸಚಿವರ ಪುತ್ರನಿಗೆ ಕರೆ ಮಾಡಿ ಮಾತನಾಡಿ ಎಂಬ ಸೂಚನೆಗಳು ಆಡಿಯೋದಲ್ಲಿ ಇದೆ ಎನ್ನಲಾಗಿದೆ.ಇದನ್ನೂ ಓದಿ: ಸಿದ್ರಾಮಯ್ಯಗೂ ಟ್ರಾಫಿಕ್ ಬಿಸಿ – ವಾಹನಗಳ ತೆರವಿಗೆ ಹರಸಾಹಸ; ಬೈಕ್ ಸವಾರನಿಗೆ ಒದಿಯಲು ಮುಂದಾದ ಎಸ್ಪಿ!

