ಮಡಿಕೇರಿ: ಕಾಫಿನಾಡು ಕೊಡಗು ಪ್ರಕೃತಿ ಸೌಂದರ್ಯದ ತಾಣ. ಎತ್ತನೋಡಿದರೂ ಹಚ್ಚಹಸಿರಿನಿಂದ ಕಂಗೊಳಿಸೋ ಬೆಟ್ಟ-ಗುಡ್ಡಗಳ ಸಾಲು ಪ್ರವಾಸಿಗರ ಕಣ್ಮನಸೆಳೆಯುತ್ತವೆ. ಚಳಿಗಾಲ ಬಂದರೆ ಸಾಕು ಇಲ್ಲಿನ ಸೌಂದರ್ಯ ದುಪ್ಪಟ್ಟಾಗುತ್ತದೆ. ಎಲ್ಲೆಲ್ಲೂ ಅರಳಿನಿಂತ ಕುಸುಮಗಳು ಕಂಪುಬೀರುತ್ತದೆ. ವಿಶೇಷ ಅಂದರೆ ಮಡಿಕೇರಿ ತುಂಬೆಲ್ಲಾ ಕಂಡುಬರೋ ಕಾಡುಮಲ್ಲಿಗೆ ಹೂಗಳು, ಎಲ್ಲೆಡೆ ಹಾಲ್ಚೆಲ್ಲಿದಂತೆ ಅರಳಿ ನಿಂತಿರೋ ಈ ಶ್ವೇತವರ್ಣದ ಪುಷ್ಪಗಳು ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಸಿವೆ.
ಡಿಸೆಂಬರ್, ಜನವರಿ ತಿಂಗಳಲ್ಲಿ ಕಾಡುಮಲ್ಲಿಗೆ ಕೊಡಗಿನಾದ್ಯಂತ ತನ್ನ ಸುಗಂಧ ಬೀರುತ್ತಾ ನೋಡುಗರನ್ನ ಸೆಳೆಯುತ್ತವೆ. ಮಡಿಕೇರಿ-ಕುಶಾಲನಗರ, ಮಡಿಕೇರಿ-ಸಿದ್ದಾಪುರ ರಸ್ತೆಗಳಲ್ಲಿ ಎಥೇಚ್ಚವಾಗಿ ಈ ಕಾಡು ಮಲ್ಲಿಗೆ ಹೂವುಗಳು ಕಾಣ ಸಿಗುತ್ತದೆ. ಈ ಮಾರ್ಗದಲ್ಲಿ ಅರಳಿರುವ ಹೂಗಳನ್ನು ನೋಡುವುದೇ ಚೆಂದ. ಯಾರ ಮುಡಿಗೂ ಏರದ, ದೇವರ ಪೂಜೆಗೂ ಸೇರದೆ ತನ್ನಷ್ಟಕ್ಕೆ ತಾನು ಅರಳಿ ಮರೆಯಾಗೋ ಈ ಕಾಡುಮಲ್ಲಿಗೆ ತಾನಿರುವಷ್ಟು ದಿನ ತಾನು ಯಾವ ಹೂವಿಗೂ ಕಡಿಮೆಯಿಲ್ಲ ಎನ್ನುವಂತೆ ಅರಳಿನಿಂತು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ರಸ್ತೆಬದಿಯಲ್ಲಿ ಹೂವುಗಳು ಅರಳಿ ನಿಂತಿರುವುದರಿಂದ ಪ್ರಯಾಣಿಕರು, ದಾರಿಹೋಕರು ಒಂದರೆಕ್ಷಣ ಹೂವುಗಳ ಬಳಿ ನಿಂತು ಅವುಗಳ ಅಂದವನ್ನ ಕಣ್ತುಂಬಿಕೊಂಡು ಹೋಗುತ್ತಾರೆ. ಕಾಡುಮಲ್ಲಿಗೆಯಿಂದ ಯಾರಿಗೇನೂ ಅನುಕೂಲವಿಲ್ಲದಿದ್ದರೂ ತಾನು ಅರಳಿರುವ 20 ದಿನಗಳು ನೋಡಗರನ್ನ ತನ್ನತ್ತ ಸೆಳೆಯುವ ಈ ಕಾಡಿನ ಹೂವುಗಳು ಸುಮಧುರ ಸುವಾಸನೆ, ನೋಡುತ್ತಾ ನಿಂತರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಸೌಂದರ್ಯವನ್ನು ತುಂಬಿಕೊಂಡು ಬೀಗುತ್ತ ಕಣ್ಮನಸೆಳೆಯುತ್ತಿವೆ.
ಯಾರ ಪಾಲನೆ, ಪೋಷಣೆಯೂ ಇಲ್ಲದೆ ತನ್ನಷ್ಟಕ್ಕೆ ತಾನೇ ಹುಟ್ಟಿ, ಅರಳಿ ಮರೆಯಾಗುವ ಕಾಡುಮಲ್ಲಿಗೆ ಹೂವುಗಳು ಪುಷ್ಪಪ್ರಿಯರಿಗೆ ಮುದ ನೀಡುತ್ತಿವೆ. ಕೊಡಗಿನಲ್ಲಿ ಚಳಿಗಾಲದಲ್ಲಿ ಅರಳಿ ಕಂಗೂಳಿಸೋ ನೂರಾರು ಹೂವುಗಳ ನಡುವೆ ಹೆಚ್ಚು ಗಮನಸೆಳೆಯೋ ಹೂವು ಅಂದರೆ ಕಾಡುಮಲ್ಲಿಗೆ. ಇನ್ನು ಕೆಲವೇ ದಿನಗಳಲ್ಲಿ ಮರೆಯಾಗೋ ಈ ಸುಂದರ ಹೂವುಗಳು ಸದ್ಯಕ್ಕೆ ಪುಷ್ಪ ಪ್ರಿಯರಿಗೆ ಖುಷಿ ನೀಡುತ್ತಿವೆ.