ಬೆಂಗಳೂರು: ವಿಧಾನಪರಿಷತ್ ಸದಸ್ಯರ ಕಾರಿನ ನಂಬರ್ ಪ್ಲೇಟ್ (Number Plate) ಬಳಸಿ ವಂಚಕರು ಕದ್ದ ಕಾರುಗಳನ್ನು ಮಾರಾಟ ಮಾಡಲು ಮಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಡಿಎಸ್ (JDS) ಎಂಎಲ್‍ಸಿ ಭೋಜೇಗೌಡರ (Bhoje Gowda) ಕಾರಿನ ನಂಬರನ್ನು ಬಳಸಿ ಕದ್ದ ಕಾರನ್ನು (Car) ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿ ನಡೆದಿದೆ. ಕಾರ್ ಶೋ ರೂಂವೊಂದರಲ್ಲಿ ಭೋಜೇಗೌಡರ ಇನೋವಾ ಕಾರಿನ ನಂಬರ್ ಹಾಕಿ ಮಾರಾಟಕ್ಕೆ ನಿಲ್ಲಿಸಲಾಗಿತ್ತು. ಈ ಕಾರಿನ ನಂಬರ್ ನೋಡಿದ ಭೋಜೆಗೌಡರ ಪಿಎ ಮಾದೇಶ್ ಒಮ್ಮೆಲೇ ಶಾಕ್ ಆಗಿದ್ದಾರೆ. ಇದರಿಂದ ಅನುಮಾನಗೊಂಡು ಶೋರೂಂನಲ್ಲಿ ಆ ಕಾರಿನ ಬಗ್ಗೆ ವಿಚಾರಿಸಿದ್ದಾರೆ.
ಈ ವೇಳೆ ಶೋರೂಂನವರು ಕಾರನ್ನು ಮಾರಾಟಕ್ಕೆ ಇರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಮಾದೇಶ್ ಕೂಡಲೇ ಭೋಜೇಗೌಡರಿಗೆ ಕರೆ ಮಾಡಿ ಇನೋವಾ ಕಾರನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ಭೋಜೇಗೌಡರು ನನ್ನ ಇನೋವಾ ಕಾರು ಮನೆಯಲ್ಲೇ ಇದೆ. ಇದನ್ನು ಮಾರಾಟಕ್ಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರೂ ಅಧಿಕಾರಿಗಳು ಡೋಂಟ್ ಕೇರ್!
ಇದಾದ ಬಳಿಕ ಕೂಡಲೇ ಮಾದೇಶ್ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿ ಹೈಗ್ರೌಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕದ್ದ ಕಾರುಗಳಿಗೆ ನಂಬರ್ ಬದಲಾಯಿಸಿ, ಮಾರಾಟ ಮಾಡುತ್ತಿದ್ದುದ್ದು ಯಾಕೆ ಎನ್ನುವುದನ್ನು ಪತ್ತೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ