ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಮುದುವರೆದಿದೆ. ಢಾಕಾದಲ್ಲಿರುವ ಇಸ್ಕಾನ್ (Iskcon) ಕೇಂದ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅದರಲ್ಲಿದ್ದ 2 ದೇವಸ್ಥಾನ ಹಾಗೂ ದೇವರ ಮೂರ್ತಿಗಳು ಭಾಗಶಃ ಸುಟ್ಟು ಕರಕಲಾಗಿವೆ.
ಈ ಕುರಿತು ಕೋಲ್ಕತಾ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹಾಗೂ ಬಾಂಗ್ಲಾ ಇಸ್ಕಾನ್ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ ಬ್ರಹ್ಮಚಾರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಾಂಗ್ಲಾದ ಢಾಕಾ ಜಿಲ್ಲೆಯಲ್ಲಿರುವ ನಮ್ಮಟ್ಟಾ ಇಸ್ಕಾನ್ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದೆ. ಪರಿಣಾಮ ಅಲ್ಲಿದ್ದ ರಾಧಾ ಕೃಷ್ಣ ದೇವಸ್ಥಾನ ಹಾಗೂ ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಗಳು ಬೆಂಕಿಗೆ ಆಹುತಿಯಾಗಿವೆ. ಬೆಳಗಿನ ಜಾವ 2 – 3 ಗಂಟೆಯ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷ್ಮೀ ನಾರಾಯಣಮೂರ್ತಿ ಸೇರಿದಂತೆ ಕೆಲವು ಮೂರ್ತಿಗಳು ಸುಟ್ಟು ಹೋಗಿವೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ ಎಂದು ವರದಿಯಾಗಿದೆ.
ಇಂತಹ ಘಟನೆಗಳನ್ನು ಮಧ್ಯಂತರ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಸಹ ಪೊಲೀಸರು ಹಾಗೂ ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ ಎಂದು ಚಾರು ಚಂದ್ರದಾಸ ಬ್ರಹ್ಮಚಾರಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರವೂ 3 ದೇಗುಲಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳಲು ತಿಲಕ ಧರಿಸದಂತೆ ಇಸ್ಕಾನ್ ಸನ್ಯಾಸಿಗಳು ಹಾಗೂ ಅನುಯಾಯಿಗಳಿಗೆ ಅವರು ಕರೆ ನೀಡಿದ್ದರು.