ಬಳ್ಳಾರಿ: ಲೋಕಸಭಾ ಉಪಚುನಾವಣೆಯ ವೇಳೆಯಲ್ಲೇ ಬಳ್ಳಾರಿ ಬ್ರೂಸ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರ ಮನೆ ಮೇಲೆ ದಾಳಿ ಮಾಡಲಾಗಿದೆ.
ಮಾಜಿ ಶಾಸಕ ಅನಿಲ್ ಲಾಡ್ ಆಪ್ತ ಸಹಾಯಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರ್ಷದ್ ಅಹ್ಮದ್ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ನಿರ್ಮಾಣ ಹಂತದ ಮನೆಯ ಬಾಗಿಲು ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ.
2 ಬೈಕ್‍ಗಳಲ್ಲಿ ಬಂದಿದ್ದರೆನ್ನಲಾದ ದುಷ್ಕರ್ಮಿಗಳು ಹರ್ಷದ್ ಅಹ್ಮದ್ ಮನೆ ಮೇಲೆ ದಾಳಿ ಮಾಡಿರುವುದು ರಾಜಕೀಯ ವೈಷಮ್ಯಕ್ಕೆ ಮತ್ತಷ್ಟೂ ಕಿಚ್ಚು ಹಚ್ಚಿದಂತಾಗಿದೆ. ಚುನಾವಣಾ ಪ್ರಚಾರ ಮುಗಿಸಿಕೊಂಡು ಮನೆಯಲ್ಲಿದ್ದ ಹರ್ಷದ್ ಅಹ್ಮದ್ ರ ಮನೆಯಿಂದ ಹೊರಬರುವ ಮುನ್ನವೇ ದುಷ್ಕರ್ಮಿಗಳು ಕಾರು ಕಿಟಕಿ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹರ್ಷದ್ ಅಹ್ಮದ್ ಗೆ ಧೈರ್ಯ ತುಂಬಿದ್ದಾರೆ.
2008ರಲ್ಲೂ ಸಹ ಇದೇ ರೀತಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ಮನೆ ಮುಂದಿದ್ದ ಕಾರುಗಳನ್ನು ಸುಟ್ಟು ಹಾಕಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿತ್ತು. ಹೀಗಾಗಿ ಈ ಪ್ರಕರಣ ಇದೀಗ ರಾಜಕೀಯ ಪ್ರಚಾರದಲ್ಲಿ ಮತ್ತಷ್ಟೂ ಕಿಚ್ಚು ಹಚ್ಚಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv