ಯಾದಗಿರಿ: ಚುನಾವಣೆ ಕಾವು ಹೆಚ್ಚಳವಾಗುತ್ತಿದಂತೆ ರಾಜಕೀಯ ದುರುದ್ದೇಶದಿಂದ ಕೂಡಿರುವ ಕೃತ್ಯಗಳು ಆರಂಭವಾಗಿದ್ದು, ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಪತ್ನಿ ಮೇಲೆ ಮಾರಣಾಂತಿಕವಾಗಿ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಡೆಸಿದ್ದಾರೆ. ಆದರೆ ಬಿಜೆಪಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾಗನೂರ ಪತ್ನಿ ಶಿಲ್ಪಾ ಮಾಗನೂರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
Advertisement
Advertisement
ಕಳೆದ ಬಾರಿ ಬಿಜೆಪಿ ಪಕ್ಷದಿಂದ ಚಂದ್ರಶೇಖರ್ ಮಾಗನೂರ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಭಾರಿ ಯಾದಗಿರಿ ಮತಕ್ಷೇತ್ರ ಬಿಜೆಪಿ ಆಕಾಂಕ್ಷಿಯಾಗಿದ್ದರು. ಆದರೆ ಗುರುವಾರ ಬೆಳಗ್ಗೆ ಚಂದ್ರಶೇಖರ್ ಅವರ ಸ್ವಗ್ರಾಮವಾಗಿರುವ ಸುರಪುರ ತಾಲೂಕಿನ ರಾಜನಕೋಳುರ ಗ್ರಾಮದ ಮನೆ ಬಳಿ ಪತ್ನಿ ಶಿಲ್ಪಾ ವಾಯು ವಿಹಾರಕ್ಕೆ ತೆರಳಿದಾಗ ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಶಿಲ್ಪಾರಿಗೆ ಕಾಯಿಸಿದ ಕಬ್ಬಿಣದ ರಾಡ್ ಬರೆ ಎಳೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಮೂಲಕ ಚಂದ್ರಶೇಖರ ಮಾಗನೂರ ಅವರನ್ನು ರಾಜಕೀಯ ಬಿಡಬೇಕೆಂದು ದುಷ್ಕರ್ಮಿಗಳು ಜೀವ ಬೇದರಿಕೆ ಕೂಡ ಹಾಕಿದ್ದಾರೆ.
Advertisement
ಸದ್ಯ ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡಿರುವ ಶಿಲ್ಪಾ ಅವರು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶಿಲ್ಪಾ ಮೇಲಾದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನೀತಿಸಂಹಿತೆ ಲೆಕ್ಕಿಸದೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಶಿಲ್ಪಾ ಮಾಗನೂರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಅಲ್ಲದೇ ಹಲ್ಲೆಯನ್ನು ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಕೊಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಘಟನೆ ಕುರಿತು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.