ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮುಸ್ಲಿಂ ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಮಂಡಕ್ಕಿ ಭಟ್ಟಿ ಹಿಂಭಾಗದ ಕೊರಚರಹಟ್ಟಿಯಲ್ಲಿ ಘಟನೆ ನಡೆದಿದೆ. ಜೀಲಾನಿ(22) ಹಾಗೂ ಇಮ್ರಾನ್(18) ಇರಿತಕ್ಕೊಳಗಾದ ಯುವಕರು ಎಂದು ಗುರುತಿಸಲಾಗಿದೆ.
ಅದೇ ಏರಿಯಾದ ದುಗ್ಗೇಶ್ ಹಾಗೂ ಆತನ ಸ್ನೇಹಿತರು ಹಲ್ಲೆಗೊಳಗಾದ ಯುವಕರ ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದರು. ಸ್ಥಳದಲ್ಲಿದ್ದ ಈ ಇಬ್ಬರು ಯುವಕರು ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಅಕ್ರೋಶಗೊಂಡ ದುಗ್ಗೇಶ್ ಆತನ ಸ್ನೇಹಿತರು ಜಿಲಾನಿ ಹಾಗೂ ಇಮ್ರಾನ್ ಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಮಾಡಿದ ದುಗ್ಗೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆಯಾದ ಸ್ಥಳದಲ್ಲಿ ಬಿಗುವಿನ ವಾತವರಣವಿದೆ. ಘಟನಾ ಸ್ಥಳದಲ್ಲಿ ಜಿಲ್ಲಾಧಿಕಾರಿ ಡಿಎಸ್ ರಮೇಶ್ ಹಾಗೂ ಎಸ್‍ಪಿ ಭೀಮಾಶಂಕರ್ ಗುಳೇದ್ ಬೀಡು ಬಿಟ್ಟಿದ್ದು, ಪೊಲೀಸರು ನಗರದಾದ್ಯಂತ ಹೈ ಹಲರ್ಟ್ ಘೋಷಣೆ ಮಾಡಿದ್ದಾರೆ.
ಹಲ್ಲೆಗೊಳಗಾದ ಯುವಕರಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಸಲ್ಲದ ಊಹಾ ಪೋಹಗಳಿಗೆ ಕಿವಿಗೊಡಬಾರದೆಂದು ಎಸ್‍ಪಿ ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.