– ಚಲುವರಾಜುವೇ ನಿಜವಾದ ಆರೋಪಿ
ಬೆಂಗಳೂರು: ಜಾತಿ ನಿಂದನೆ ಪ್ರಕರಣದಲ್ಲಿ (Atrocity Case) ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮಂತ್ರಿ, ಬಿಜೆಪಿ ಶಾಸಕ ಮುನಿರತ್ನ (Munirathna) ಅವರ ಜಾಮೀನು (Bail) ಭವಿಷ್ಯ ಗುರುವಾರ ನಿರ್ಧಾರ ಆಗಲಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆ ವೇಳೆ ಮುನಿರತ್ನ ಜಾಮೀನು ಅರ್ಜಿಗೆ ಎಸ್‌ಪಿಪಿ ಪ್ರದೀಪ್ ಕುಮಾರ್ ಆಕ್ಷೇಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷದ ಹಳೆಯ ಪ್ರಕರಣ. ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ನಿಂದನೆ ಅಲ್ಲ ಎಂದು ವಾದಿಸಿದರು.
ಈಗ ಜನಾಂಗಿಯ ನಿಂದನೆ, ಪ್ರಚೋದನೆ ಎಂದೆಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ಸೆಕ್ಷನ್ ಪ್ರಕಾರ ನಿಂದನೆ ಮಾಡುವಾಗ ಇಬ್ಬರಿಗಿಂತ ಹೆಚ್ಚು ಜನ ಇರಬೇಕು. ಗುಂಪಿನಲ್ಲಿ ಜಾತಿನಿಂದನೆ ಮಾಡಿರಬೇಕು. ಇಲ್ಲಿ ಚಲುವರಾಜುನೇ ನಿಜವಾದ ಆರೋಪಿ ಎಂದು ವಾದ ಮಂಡಿಸಿದರು. ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ – ನ.20 ರವರೆಗೆ ಅವಧಿ ವಿಸ್ತರಣೆ
ರಾಜಕೀಯ ಕಾರಣಕ್ಕಾಗಿಯೇ ಮುನಿರತ್ನ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈಗಾಗಲೇ ಆರೋಪಿಯ ವಾಯ್ಸ್ ಸ್ಯಾಂಪಲ್ ಸಂಗ್ರಹ ಮಾಡಿ ಆಗಿದೆ. ಸಾಕ್ಷಿದಾರರ ಹೇಳಿಕೆಯೂ ದಾಖಲಾಗಿದೆ. ಈಗ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಜಾಮೀನು ನೀಡಬಹುದು ಎಂದು ವಕೀಲರು ಕೋರಿದರು. ನಂತರ ಎಸ್‌ಪಿಪಿ ಪ್ರದೀಪ್ ಕುಮಾರ್ ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಗುರುವಾರಕ್ಕೆ ಆದೇಶವನ್ನು ಕಾಯ್ದಿರಿಸಿದರು. ಇದರ ಮಧ್ಯೆ ತಮ್ಮ ವಿರುದ್ಧದ ಮತ್ತೊಂದು ಪ್ರಕರಣ ಸಂಬಂಧ ಮುನಿರತ್ನ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯೂ ನಡೆಯಿತು. ಇದರ ಆದೇಶವನ್ನೂ ಕೋರ್ಟ್ ಗುರುವಾರಕ್ಕೆ ಕಾಯ್ದಿರಿಸಿದೆ.