ಬೆಂಗಳೂರು: ಉಪ್ಪು ತಿಂದವ ನೀರು ಕುಡಿಯಬೇಕು, ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಭ್ರಷ್ಟಾಚಾರ ಮುಚ್ಚಿಕೊಳ್ಳುವ ಮಾತಾಡಬೇಡಿ. ಕಾಂಗ್ರೆಸ್‌ಗೆ (Congress) ಸೇರಿದ ಮೇಲೆ ಆತ್ಮಸಾಕ್ಷಿ ಮಾರ್ಕೊಂಡಿದ್ದೀರಾ, ಹೈಕಮಾಂಡ್ ಒತ್ತಡಕ್ಕೆ ಭ್ರಷ್ಟಾಚಾರ, ಲೂಟಿ ಮಾಡುವ ಅನಿವಾರ್ಯತೆ ಬಂದಿರಬೇಕು ಎಂದು ಸಿಎಂ ವಿರುದ್ಧ ಸಿಟಿ ರವಿ (CT Ravi) ಹರಿಹಾಯ್ದರು.
ಭ್ರಷ್ಟಾಚಾರದ ಕುರಿತಾಗಿ ಸಿಎಂ (Siddaramaiah) ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ನ್ಯಾಯಯುತ ತನಿಖೆ ನಡೆಯಲಿ ಎಂದು ಅನುಮತಿ ಕೊಟ್ಟಿದ್ದಾರೆ. ಅವರು ತನಿಖೆಗಷ್ಟೇ ಅನುಮತಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನವರು ರಾಜ್ಯಪಾಲರ ಪ್ರತಿಕೃತಿ ದಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಚೋರ್ ಉಲ್ಟಾ ಕೊತ್ವಾಲ್ ಕೊ ಡಾಂಟಾ ಅನ್ನುವಂತಾಗಿದೆ. ದಲಿತ ಸಮುದಾಯದ ರಾಜ್ಯಪಾಲರನ್ನು ಕಾಂಗ್ರೆಸ್‌ನವರು ನಿಂದಿಸಿದ್ದಾರೆ. ಪೊಲೀಸರು ಕಾಂಗ್ರೆಸ್‌ನವರ ಮೇಲೆ ಅಟ್ರಾಸಿಟಿ ದೂರು ದಾಖಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ದಯನೀಯವಾಗಿದೆ: ಕೇಂದ್ರ
ಯಡಿಯೂರಪ್ಪ (Yadiyurappa) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಸಿದ್ದರಾಮಯ್ಯ ಏನು ಹೇಳಿದರು ಎಂಬುದನ್ನು ನೆನಪಿಸಿಕೊಳ್ಳಲಿ. ರಾಜ್ಯಪಾಲರು ಸಂವಿಧಾನ ಬದ್ಧ ತೀರ್ಮಾನ ತೆಗೆದುಕೊಂಡಿದ್ದಾರೆ. ನ್ಯಾಯಯುತ ತನಿಖೆಗೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಅಂದಿದ್ದರು. ಸಿಎಂಗೆ ಮರೆವಿನ ಕಾಯಿಲೆ ಇದೆ. ಆವತ್ತು ಅವರು ಆಡಿದ ಮಾತು ಇವತ್ತು ನಾವು ನೆನಪು ಮಾಡಿಕೊಡುತ್ತಿದ್ದೇವೆ. ಅದೇ ರಾಜಭವನ, ಅದೇ ಅಧಿಕಾರ ಇವತ್ತಿನ ರಾಜ್ಯಪಾಲರಿಗೂ ಇದೆ. ಆಗ ಪ್ರಾಸಿಕ್ಯೂಷನ್ ಯಡಿಯೂರಪ್ಪ ಮೇಲಿತ್ತು, ಈಗ ನಿಮ್ಮ ಮೇಲಿದೆ. ಪಾತ್ರಧಾರಿಗಳಷ್ಟೇ ಬದಲು, ಈಗ ನಿಮ್ಮ ಮಾತಿನಂತೆ ನೀವು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಡಾ ಹಗರಣ| ಇಷ್ಟು ಆತುರ ಏನು – ಸಿಎಂ ಪರ ವಕೀಲರಿಗೆ ಜಡ್ಜ್ ಪ್ರಶ್ನೆ
ನೀವು ಎರಡು ನಾಲಿಗೆಯವರಾಗಬಾರದು. ನೀವು ಅಧಿಕಾರದಲ್ಲಿದೀರ, ತನಿಖೆ ಪಾರದರ್ಶಕತೆಯಿಂದ ನಡೆಯುವುದಿಲ್ಲ. ನೀವು ರಾಜೀನಾಮೆ ಕೊಡಿ. 136 ಶಾಸಕರು ಇದ್ದಾರಲ್ಲ. ಯಾರನ್ನಾದರೂ ಕೈಗೊಂಬೆ ಮಾಡಿಕೊಂಡು ಸಿಎಂ ಮಾಡಿ. ನಿಮ್ಮ ಸರ್ಕಾರವನ್ನು ನಾವು ಅಸ್ಥಿರಗೊಳಿಸುತ್ತಿಲ್ಲ. ನಮಗೆ ಹೊಟ್ಟೆಯುರಿ ಇಲ್ಲ. ನಿಮ್ಮ ಗ್ಯಾರಂಟಿ ಹೇಗೆ ಜಾರಿಯಾಗುತ್ತಿದೆ ನೋಡುತ್ತಿದ್ದೇವೆ. ಅಹಿಂದ ಸಿಎಂ ಅನ್ನೋ ಮಾತನ್ನು ಆಡುತ್ತಿದ್ದೀರಿ, ಅದೇನು ನಿಮಗೆ ಲೂಟಿ ಹೊಡೆಯುವ ಲೈಸೆನ್ಸಾ? ಗ್ಯಾರಂಟಿಗಳು ನಿಮಗೆ ಲೂಟಿಗೆ ಲೈಸೆನ್ಸ್ ಕೊಟ್ಟಿವೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಸಾಹಿತಿಗಳು – ಪ್ರತಿಭಟನೆಗೆ ಕರೆ