-ಹಳ್ಳಿ ಜನರೇ ಇವನ ಟಾರ್ಗೆಟ್
-ಎಟಿಎಂನಿಂದ ಹೊರ ಬರ್ತಿದ್ದಂತೆ ಹಣ ಮಾಯ
ಮಂಡ್ಯ: ಹಳ್ಳಿಗಾಡಿನ ಜನರಿಗೆ ಹಾಗೂ ಅನಕ್ಷರಸ್ಥರಿಗೆ ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ಬೇರೆ ಅವರ ಅಕೌಂಟ್‍ನಿಂದ ಎಟಿಎಂನಲ್ಲಿ ಹಣ ದೋಚುತ್ತಿದ್ದ ಖದೀಮನನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಒಟ್ಟು 9 ಎಟಿಎಂಗಳಲ್ಲಿ ಅನಕ್ಷರಸ್ಥರ ಹಾಗೂ ಗ್ರಾಮೀಣ ಭಾಗದವರ ಬ್ಯಾಂಕ್ ಅಕೌಂಟ್‍ನಲ್ಲಿ ಇದ್ದ ಹಣವನ್ನು ಕದಿಯುತ್ತಿದ್ದ ಆರೋಪಿ ಗಿರೀಶ್ ಸಿದ್ದಮನಿಯಪ್ಪನವರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನ ಹಿರೇಮರುಬ ಗ್ರಾಮದವನಾಗಿದ್ದು, ಮಂಡ್ಯ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಅಪರಾಧ ಕೃತ್ಯದಲ್ಲಿ ತೊಡಗಿದ್ದ.
Advertisement
Advertisement
ಮೊದಲು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟಣ್ಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಎರಡು ಎಟಿಎಂಗಳಲ್ಲಿ, ಕುಣಿಗಲ್ ಪೊಲೀಸ್ ಠಾಣೆಯ ಒಂದು ಎಟಿಎಂನಲ್ಲಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಎಟಿಎಂನಲ್ಲಿ, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ಎಟಿಎಂನಲ್ಲಿ ಹಾಗೂ ಮಳವಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎರಡು ಎಟಿಎಂಗಳಲ್ಲಿ ಗಿರೀಶ್ ಹಣ ಕದ್ದಿದ್ದಾನೆ. ಒಟ್ಟು 9 ಎಟಿಎಂಗಳಲ್ಲಿ 5,02,400 ರೂಪಾಯಿ ಹಣವನ್ನು ಕಳವು ಮಾಡಿದ್ದಾನೆ.
Advertisement
Advertisement
ಹೇಗೆ ಕದಿಯುತ್ತಿದ್ದ?
ಗಿರೀಶ್ ನಕಲಿ ಎಟಿಎಂ ಕಾರ್ಡುಗಳನ್ನು ಬಳಸಿ ಕೃತ್ಯ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಎಟಿಎಂಗಳಿಗೆ ಬರುವ ಅನಕ್ಷರಸ್ಥರಿಗೆ ಹಾಗೂ ಹಳ್ಳಿಗಾಡಿನ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಪಿನ್ ನಂಬರ್ ಗಳನ್ನು ನೋಡಿಕೊಳ್ಳುತ್ತಿದ್ದ. ನಂತರ ಅವರ ಅಸಲಿ ಎಟಿಎಂ ಕಾರ್ಡನ್ನು ತಾನು ಇಟ್ಟುಕೊಂಡು ತನ್ನಲ್ಲಿದ್ದ ನಕಲಿ ಎಟಿಎಂ ಕಾರ್ಡನ್ನು ಅವರಿಗೆ ಕೊಡುತ್ತಿದ್ದ. ನಂತರ ಅಸಲಿ ಎಟಿಎಂ ಬಳಸಿ ಅವರ ಖಾತೆಯಲ್ಲಿದ್ದ ಹಣ ದೋಚುತ್ತಿದ್ದ.
ಪ್ರಕರಣ ಹೇಗೆ ಬೆಳಕಿಗೆ ಬಂತು?
ನಾನಾ ಭಾಗಗಳಲ್ಲಿ ಜನರಿಗೆ ಮೋಸ ಮಾಡಿ ಅವರ ಎಟಿಎಂ ಕಾರ್ಡ್ ಮೂಲಕ ಹಣ ದೋಚುತ್ತಿದ್ದ ಗಿರೀಶ್, ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೂ ಸಹ ತನ್ನ ಕೈಚಳ ತೋರಿಸಿದ್ದಾನೆ. ಮಳವಳ್ಳಿ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದ ಚೆನ್ನಯ್ಯ ಅವರಿಗೆ ಸಹಾಯ ಮಾಡವ ನೆಪದಲ್ಲಿ ಎಟಿಎಂ ಕಾರ್ಡ್ ಎಗರಿಸಿದ್ದಾನೆ. ನಂತರ ಪಕ್ಕದ ಎಟಿಎಂಗೆ ಬಂದಿದ್ದ ನಾಗರತ್ನಮ್ಮ ಎಂಬುವವರಿಗೂ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಎಗರಿಸಿದ್ದಾನೆ. ನಂತರ ಆ ಎಟಿಎಂ ಕಾರ್ಡುಗಳನ್ನು ಉಪಯೋಗಿಸಿ ಬೇರೆ ಕಡೆಯ ಎಟಿಎಂಗಳಲ್ಲಿ 1.37 ಲಕ್ಷ ರೂ. ಹಣ ಡ್ರಾ ಮಾಡಿದ್ದಾನೆ. ಈ ಕುರಿತು ನಾಗರತ್ನಮ್ಮ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಪೊಲೀಸರು ಎಟಿಎಂಗಳ ಸಿಸಿ ಟಿವಿಯನ್ನು ಪರಿಶೀಲಿಸುತ್ತಾರೆ. ಬಳಿಕ ಹಣ ಡ್ರಾ ಮಾಡಿರುವ ಎಟಿಎಂ ಸ್ಥಳಗಳನ್ನು ಪರಿಶೀಲಿಸಿದ್ದಾರೆ, ಇದರ ಫೋಟೊ ತೆಗೆದುಕೊಂಡ ಪೊಲೀಸರು, ಗಿರೀಶ್‍ಗಾಗಿ ಹುಡುಕಾಟ ಆರಂಭಿಸುತ್ತಾರೆ. ತನಿಖೆ ಬಳಿಕ ಗಿರೀಶ್ ಬೆಂಗಳೂರಿನ ನಾಗಸಂದ್ರದಲ್ಲಿ ಇರುವುದು ಪೊಲೀಸರಿಗೆ ತಿಳಿಯುತ್ತದೆ. ನಂತರ ಪೊಲೀಸರು ಗಿರೀಶ್‍ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನು ಮಾಡಿದ ಕಳ್ಳತನದ ಕುರಿತು ಬಾಯ್ಬಿಟ್ಟಿದ್ದಾನೆ. ಬಂಧಿತ ಗಿರೀಶ್‍ನಿಂದ 5,02,400 ರೂಪಾಯಿ ನಗದು, ಎರಡು ಉಂಗುರ ಹಾಗೂ ಒಂದು ಬೈಕ್‍ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.