Connect with us

90 ಲಕ್ಷ ಹಣವಿದ್ದ ವಾಹನ ಸಮೇತ ಎಟಿಎಂ ಸಿಬ್ಬಂದಿ ಪರಾರಿ

90 ಲಕ್ಷ ಹಣವಿದ್ದ ವಾಹನ ಸಮೇತ ಎಟಿಎಂ ಸಿಬ್ಬಂದಿ ಪರಾರಿ

ಬೆಂಗಳೂರು: ವಾಹನದ ಗನ್ ಮ್ಯಾನ್‍ಗೆ ಬಾಳೆಹಣ್ಣು ತರಲು ಹೇಳಿ ಕ್ಷಣಮಾತ್ರದಲ್ಲಿ 90 ಲಕ್ಷ ಹಣವಿದ್ದ ಎಟಿಎಂ ವಾಹನದ ಸಮೇತ ಸಿಬ್ಬಂದಿಯೇ ಪರಾರಿಯಾಗಿರುವ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಟಿಎಂ ಹಣ ತುಂಬುವ ಸಿಎಂಎಸ್ ಕಂಪನಿಯ ವಾಹನದಲ್ಲಿ 90 ಲಕ್ಷ ಹಣ ತುಂಬಿಕೊಂಡ ಗನ್ ಮ್ಯಾನ್ ನಟರಾಜ್, ಸಿಬ್ಬಂದಿ ನರಸಿಂಹಮೂರ್ತಿ, ಚಾಲಕ ನಾರಾಯಣಸ್ವಾಮಿ ವಿವಿಧ ಎಟಿಎಂಗಳಿಗೆ ಹಣ ತುಂಬಲು ಇಂದು ತೆರಳಿದ್ದರು. ಈ ವೇಳೆ ಜ್ಞಾನಭಾರತಿ ಸರ್ಕಲ್ ಬಳಿ ವಾಹನ ನಿಲ್ಲಿಸಿದ ಸಿಬ್ಬಂದಿ ನರಸಿಂಹಮೂರ್ತಿ, ಗನ್ ಮ್ಯಾನ್ ನಟರಾಜ್‍ಗೆ ಬಾಳೆಹಣ್ಣು ತರಲು ಸೂಚಿಸಿದ್ದಾನೆ. ಆದರೆ ಗನ್‍ಮ್ಯಾನ್ ಬಾಳೆಹಣ್ಣು ತರುವಷ್ಟರಲ್ಲಿ ಎಟಿಎಂ ವಾಹನದಲ್ಲಿದ್ದ 90 ಲಕ್ಷ ಹಣದ ಸಮೇತ ಇಬ್ಬರು ಸಿಬ್ಬಂದಿಗಳು ಪರಾರಿಯಾಗಿದ್ದಾರೆ.

ನಂತರ ಜ್ಞಾನಭಾರತಿ ವೃತ್ತದಿಂದ ಹೊರಟ ವಾಹನದ ಚಾಲಕ ನಾರಾಯಣಸ್ವಾಮಿ ಮತ್ತು ನರಸಿಂಹ ಮೂರ್ತಿ, ವಾಹನವನ್ನು ಕಿತ್ತನಹಳ್ಳಿ ಬಳಿ ಬಿಟ್ಟು ಹಣದ ಸಮೇತ ಪರಾರಿಯಾಗಿದ್ದಾರೆ.

ಹಣದ ಸಮೇತ ಪರಾರಿಯಾದ ಆರೋಪಿ ನರಸಿಂಹಮೂರ್ತಿ ತುಮಕೂರು ಮೂಲವನಾಗಿದ್ದು, ವಾಹನ ಚಾಲಕ ನಾರಾಯಣಸ್ವಾಮಿ ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿದ್ದಾನೆ. ಅಲ್ಲದೇ ಇಬ್ಬರು ಮೈತುಂಬಾ ಸಾಲ ಮಾಡಿಕೊಂಡಿದ್ದರು ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗ್ತಿದ್ದು, ಸಿಬ್ಬಂದಿಯೇ ಈ ರೀತಿ ಹಣ ದೋಚಿ ಪರಾರಿಯಾಗ್ತಿರೋದು ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಆತಂಕಕ್ಕೆ ದೂಡಿದೆ.

Advertisement
Advertisement