ನವದೆಹಲಿ: ಎಲ್ಲಾ ಹೀರೋಗಳು ಸಿನಿಮಾಗಳಲ್ಲಿ ನಟಿಸಲ್ಲ. ಕೆಲವು ನಿಜಜೀವನದ ಹೀರೋಗಳೂ ಇರ್ತಾರೆ. ಅದಕ್ಕೆ ಉದಾಹರಣೆ ಈ ಘಟನೆ. ದುಷ್ಕರ್ಮಿಗಳು ಶೂಟ್ ಮಾಡಿದ್ರೂ ಕೂಡ ಎಟಿಎಂ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ದರೋಡೆ ಯತ್ನವನ್ನು ವಿಫಲಗೊಳಿಸಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಸುದ್ದಿ ಸಂಸ್ಥೆ ಇದರ ಸಿಸಿಟಿವಿ ದೃಶ್ಯಾವಳಿಯನ್ನ ಹಂಚಿಕೊಂಡಿದೆ.
Advertisement
ದೆಹಲಿಯ ಮಾಜ್ರಾ ದಾಬಸ್‍ನ ಎಸ್‍ಬಿಐ ಎಟಿಎಂವೊಂದರ ಬಳಿ ಬುಧವಾರದಂದು ಈ ಘಟನೆ ನಡೆದಿದೆ. ನೋಡೋಕೆ ವಯಸ್ಸಾದವರಂತೆ ಕಾಣೋ ಸೆಕ್ಯೂರಿಟಿ ಗಾರ್ಡ್ ಪ್ರಾಣದ ಹಂಗು ತೊರೆದು ದರೋಡೆಕೋರರನ್ನ ತಡೆದಿದ್ದಾರೆ.
Advertisement
Advertisement
ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎಟಿಎಂ ದರೋಡೆಗೆ ಯತ್ನಿಸಿದ್ದರು. ಇಬ್ಬರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು. ಎಟಿಎಂ ಬಳಿ ಬೈಕ್ ನಿಲ್ಲಿಸಿ ಒಬ್ಬ ಕೆಳಗಿಳಿದು ಮೊದಲು ಸೆಕ್ಯೂರಿಟಿ ಗಾರ್ಡ್ ಕಾಲಿಗೆ ಗುಂಡು ಹಾರಿಸೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೆ ಸೆಕ್ಯೂರಿಟಿ ಗಾರ್ಡ್ ಆತನನ್ನು ಅಡ್ಡಗಟ್ಟಿದ್ದಾರೆ. ದುಷ್ಕರ್ಮಿ ಎಟಿಎಂ ಒಳಗೆ ನುಗ್ಗದಂತೆ ತಡೆದಿದ್ದಾರೆ.
Advertisement
ಆಗ ಬೈಕ್ ಬಳಿ ಇದ್ದ ಮತ್ತೊಬ್ಬ ಎಟಿಎಂ ಒಳಗೆ ಹೋಗಲು ಪ್ರಯತ್ನಿಸಿದ್ದಾನೆ. ಆಗ ಎಟಿಎಂ ಒಳಗೆ ಗ್ರಾಹಕರೊಬ್ಬರು ಇದ್ದಿದ್ದನ್ನು ನೋಡಿ ಹಿಂದೆ ಸರಿದಿದ್ದಾನೆ. ಇತ್ತ ಸೆಕ್ಯೂರಿಟಿ ಗಾರ್ಡ್ ಏನೂ ತೊಂದರೆ ಮಾಡದಂತೆ ದುಷ್ಕರ್ಮಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಕೊನೆಗೆ ಆತ ಗಾರ್ಡ್ ಬಳಿ ಇದ್ದ ಗನ್ ಕಸಿದುಕೊಂಡಿದ್ದು, ಇಬ್ಬರೂ ಬೈಕಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಕೊನೆಗೆ ಸೆಕ್ಯೂರಿಟಿ ಗಾರ್ಡ್ ಎಟಿಎಂ ಬಾಗಿಲ ಬಳಿ ಬಂದು ಗುಂಡೇಟಿನ ನೋವಿನಿಂದ ಕುಸಿದು ಬೀಳೋದನ್ನ ಕಾಣಬಹುದು.
ಸೆಕ್ಯೂರಿಟಿ ಗಾರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 394, 397 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25, 27 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತಂಡ ರಚಿಸಿದ್ದಾರೆ ಎಂದು ವರದಿಯಾಗಿದೆ. ಸೆಕ್ಯೂರಿಟಿ ಗಾರ್ಡ್ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
#WATCH: Guard foils robbery attempt by two bikers at SBI ATM in #Delhi's Majra Dabas after being shot at by the assailants (15.11.17) pic.twitter.com/tO5cn1iuGu
— ANI (@ANI) November 16, 2017