ಲಕ್ನೋ: ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ (Atiq Ahmed) ಹಾಗೂ ಆತನ ಸಹೋದರ ಅಶ್ರಫ್‌ನನ್ನು (Ashraf) ಶನಿವಾರ ಪ್ರಯಾಗ್‌ರಾಜ್‌ನಲ್ಲಿ (Prayagraj) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉತ್ತರ ಪ್ರದೇಶದಾದ್ಯಂತ (Uttar Pradesh) ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಾದ ಅತಿಕ್ ಹಾಗೂ ಅಶ್ರಫ್‌ನನ್ನು ಶನಿವಾರ ಪ್ರಯಾಗ್‌ರಾಜ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್‌ಗೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರಿಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಅತಿಕ್ ಹಾಗೂ ಅಶ್ರಫ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆಯೇ ಪತ್ರಕರ್ತರ ರೂಪದಲ್ಲಿ ಬಂದಿದ್ದ ಬಂದೂಕುಧಾರಿಗಳು ಅವರಿಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಮೂವರು ಹಂತಕರನ್ನು ತಕ್ಷಣವೇ ಅಧಿಕಾರಿಗಳು ಬಂಧಿಸಿದ್ದು, ಅವರನ್ನು ಲವ್ಲೇಶ್, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಪತ್ರಕರ್ತರಂತೆ ಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅತಿಕ್ ಹಾಗೂ ಅಶ್ರಫ್ ಮೇಲೆ ಗುಂಡು ಹಾರಿಸಿದ್ದಾರೆ.
Advertisement
ಘಟನೆಯ ಬಳಿಕ ಮಥುರಾ, ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರಮುಖ ನಗರಗಳಲ್ಲಿ ಭದ್ರತಾ ಅಧಿಕಾರಿಗಳು ಗುಸ್ತು ತಿರುಗುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಭಾನುವಾರ ಎಲ್ಲಾ ಜಿಲ್ಲೆಗಳಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಏನಿದು ಪ್ರಕರಣ?
2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು ಇವರಿಬ್ಬರೂ ಜೈಲಿನಲ್ಲಿದ್ದರು. ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್ ಅಹ್ಮದ್, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ
ಕಳೆದ ಕೆಲ ದಿನಗಳ ಹಿಂದಷ್ಟೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅತಿಕ್ ಅಹ್ಮದ್‌ನ ಪುತ್ರ ಅಸದ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೂ ಮುನ್ನವೇ ತಮ್ಮನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗುವ ವೇಳೆ ಯಾರಾದರೂ ತಮ್ಮನ್ನು ಗುಂಡಿಕ್ಕಿ ಕೊಲ್ಲಬಹುದು ಎಂದು ಅಶ್ರಫ್ ಭೀತಿ ವ್ಯಕ್ತಪಡಿಸಿದ್ದ. ಹಾಗೂ ತಮ್ಮನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗದಂತೆ ಮನವಿ ಮಾಡಿಕೊಂಡಿದ್ದ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಗ್ಯಾಂಗ್ ಸ್ಟಾರ್ ಅತಿಕ್ ಪುತ್ರ ಎನ್‌ಕೌಂಟರ್‌ಗೆ ಬಲಿ