ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ಪಟ್ಟಣದಲ್ಲಿ ಬುಧವಾರ ಪತ್ತೆಯಾಗಿದ್ದ ದಂಪತಿಯ ಕೊಳೆತ ಶವಗಳ (Couple Death) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ ಜೋಡಿ ಕೊಲೆ (Murder) ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಅಥಣಿಯಲ್ಲಿ ನಾನಾಸಾಹೇಬ ಚವ್ಹಾಣ(58) ಜಯಶ್ರೀ ಚವ್ಹಾಣ(50) ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅಥಣಿ ಪೊಲೀಸರು ತನಿಖೆ ನಡೆಸಿದಾಗ ಜೋಡಿ ಕೊಲೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತಿದ್ದ ಆರೋಪಿಗಳು ಅರೆಸ್ಟ್
ಈಗಾಗಲೇ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದೇವೆ. ಕೊಲೆ ಮಾಡಿ ಆರು ದಿನಕ್ಕೆ ದುರ್ವಾಸನೆ ಬಂದಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಆದಷ್ಟು ಬೇಗನೇ ನಾವು ಆರೋಪಿಗಳನ್ನು ಬಂಧನ ಮಾಡುತ್ತೇವೆ ಎಂದು ಭೀಮಾಶಂಕರ ಗುಳೆದ್ ಮಾಹಿತಿ ನೀಡಿದ್ದಾರೆ.
ಮದಭಾವಿ ರಸ್ತೆ ಚವ್ಹಾಣ ತೋಟದ ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇಬ್ಬರ ಮೃತದೇಹ ಪತ್ತೆಯಾಗಿತ್ತು.