ಚಿಕ್ಕೋಡಿ(ಬೆಳಗಾವಿ): ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಎಂದು ಹೇಳಿದ್ದ ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಪಟ್ಟು ವಿಫಲವಾಗಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೆಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಇದು ಕ್ಷೇತ್ರದ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
Advertisement
Advertisement
ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಎಂದಿದ್ದ ಕುಮಟಳ್ಳಿ ಮಾತನ್ನ ಹಿಡಿದು ವ್ಯಂಗ್ಯವಾಡ್ತಿದ್ದಾರೆ. ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಅಥಣಿ ಮತಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ನ್ಯಾಯವಾದಿ ಪ್ರಮೋದ ಹಿರೇಮಣಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮಹೇಶ ಕುಮಟಳ್ಳಿ ಕಳೆದ ಒಂದು ವಾರದಿಂದಲೂ ಕ್ಷೇತ್ರದ ಜನತೆಯ ಕೈಗೆ ಸಿಕ್ಕಿಲ್ಲವಂತೆ. ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಅಥಣಿ ತಾಲೂಕಿಗೆ ಬರಬೇಕಾದ ಪರಿಹಾರ ಬಂದಿಲ್ಲ. ಇದರಿಂದ ನೆರೆ ಸಂತ್ರಸ್ಥರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಇದರ ಬಗ್ಗೆ ಕಾಳಜಿ ವಹಿಸದೆ, ಇನ್ನೂ ಬೆಂಗಳೂರಲ್ಲೇ ಇರುವ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಸಂತ್ರಸ್ತರ ಬಗ್ಗೆ ಗಮನ ವಹಿಸದೆ ಇದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸೋದಾಗಿ ಗಜಾನನ ಮಂಗಸೂಳಿ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ತನ್ನ ಅಧಿಕಾರದ ಆಸೆಗಾಗಿ ಊರೂರು ಸುತ್ತುತ್ತಾ ಅಧಿಕಾರವನ್ನು ಪಡೆಯದೇ, ಕ್ಷೇತ್ರಕ್ಕೂ ಬರದೇ ನೆರೆ ಸಂತ್ರಸ್ತರ ಕಡೆ ಗಮನ ನೀಡದೆ ಇರೋದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕ್ಷೇತ್ರದಲ್ಲಿ ಇದ್ದು ಜನರ ಅದರಲ್ಲೂ ಸಂತ್ರಸ್ತರ ಕಷ್ಟ ಆಲಿಸಲಿ ಎಂಬುದು ಸಾರ್ವಜನಿಕರ ಆಗ್ರಹ.