ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸದಾ ಹಸಿರಾಗಿರುವ ಹೆಸರು. ಅವರೊಬ್ಬ ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್ ಜನನಾಯಕ. ಅಪ್ರತಿಮ ವಾಗ್ಮಿ, ಅದ್ವಿತೀಯ ಸಂಸತ್ ಪಟು. ಕವಿ ಹೃದಯದ ಭಾವಜೀವಿ, ಸರ್ವಜನಪ್ರಿಯ ಹಾಗೂ ಬಹುರಂಗಿನ ವ್ಯಕ್ತಿತ್ವದ ಅಪೂರ್ವ ವ್ಯಕ್ತಿ, ಶಕ್ತಿಯಾಗಿದ್ದರು.
ಸ್ವಾತಂತ್ರ್ಯಹೋರಾಟದಿಂದ ಸ್ವಾತಂತ್ರದ ಸ್ವರ್ಣ ಮಹೋತ್ಸವದವರೆಗೆ ವಾಜಪೇಯಿ ನಡೆದು ಬಂದ ದಾರಿ ಕಳಂಕ ರಹಿತ. ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ನೇತೃತ್ವದಲ್ಲಿ ಕಾಶ್ಮೀರ ವಿಮೋಚನಾ ಹೋರಾಟ, ಆನಂತರ ಪ್ರಾರಂಭವಾದ ಜೆಪಿ ಆಂದೋಲನ, ತುರ್ತುಪರಿಸ್ಥಿತಿಯಲ್ಲಿ ಕಾರಾಗೃಹ ವಾಸ, ಮೊದಲನೆಯ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಅಭೂತಪೂರ್ವ ಕಾರ್ಯನಿರ್ವಹಣೆ. ನಂತರ ಭಾರತೀಯ ಜನತಾ ಪಕ್ಷದ ಕರ್ಣಧಾರತ್ವ, ಭವ್ಯ ಭಾರತದ ಕನಸುಗಾರ ಹಾಗೂ ಹರಿಕಾರ ಪ್ರಧಾನಿ ವಾಜಪೇಯಿ ಈ ವರೆಗೆ ನಡೆದು ಬಂದ ದಾರಿ ಬಲುದೂರ. ಅವರ ಜೀವನ ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸಕ್ಕೆ ಬೆಳಕಿಂಡಿ.
Advertisement
Advertisement
55 ವರ್ಷಕ್ಕೂ ಹೆಚ್ಚು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ಕಾಂಗ್ರೆಸ್ಸಿನ ಕಥೆ ಒಂದುಮುಖವಾದರೆ ಜನರ ಆಶೋತ್ತರಗಳನ್ನು ಮುಂದಿಡುತ್ತಾ ದೇಶದ ಅತ್ಯುನ್ನತ ಪಂಚಾಯತ್ – ಸಂಸತ್‍ನ ಒಳಗೆ ಮತ್ತು ಹೊರಗೆ ಜನಾಂದೋಲವನ್ನು ರೂಪಿಸಿ ಅದಕ್ಕೆ ಆಯಸ್ಕಾಂತದ ಧ್ವನಿ ಕೊಟ್ಟ ವಾಜಪೇಯಿ ಅವರ ಜೀವನ ಇನ್ನೊಂದು ಮುಖ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿ ವ್ಯಕ್ತಿತ್ವ-ವಿಚಾರ-ವಿಕಾಸದ ಮೂಸೆಯಲ್ಲಿ ಪರಿಪಕ್ವತೆಯತ್ತ ಮುನ್ನಡೆದ ಮುತ್ಸದ್ಧಿ ವಾಜಪೇಯಿಯವರು. ಅವರ ವಿಚಾರ, ನಡೆ- ನುಡಿಗಳು ಅನೇಕ ಪೀಳಿಗೆಗಳನ್ನು ಉದ್ದೀಪನಗೊಳಿಸುವಷ್ಟು ಪ್ರೇರಕವಾಗಿದ್ದವು. ವಿದೇಶಾಂಗಸಚಿವರಾಗುವ ಮೊದಲು ಮತ್ತು ನಂತರವೂ ಕೂಡ ಅವರೊಬ್ಬ ಭಾರತೀಯ ಸಂಸ್ಕೃತಿ ಯ ಮುಂಚೂಣಿ ರಾಯಭಾರಿಯಾಗಿದ್ದರು. ಭಾರತೀಯ ಚಿಂತನೆಯ ಉದಾರ ಉತ್ತುಂಗ ವಿಚಾರಗಳೆ ಮೈತಾಳಿದಂತೆ ಅವರ ಮಾತು ಹಾಗೂ ವ್ಯವಹಾರಗಳಿದ್ದವು.
Advertisement
Advertisement
ಅಂತರಾಷ್ಟ್ರೀಯ ರಾಜಕಾರಣದಲ್ಲಿ ವಾಜಪೇಯಿಯವರದ್ದೇ ವಿಶೇಷ ಛಾಪು. ಭಾರತೀಯ ನಿಯೋಗದ ನೇತೃತ್ವ ವಹಿಸಿ ಜಿನಿವಾದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಪ್ರಬಲ ಪ್ರತಿಪಾದನೆ – ಅಂತರಾಷ್ಟ್ರೀಯ ರಾಜಕಾರಣದಲ್ಲಿ ಇದು ಅವರ ಶಿಖರ ಸಾಧನೆ. ಸುಮಾರು ತೋಂಭತೈದು ಕೋಟಿಗೂ ಹೆಚ್ಚು ಜನರ ಈ ನಿತ್ಯ ನೂತನ ಚಿರಪುರಾತನ ರಾಷ್ಟ್ರದ ನೇತೃತ್ವವಹಿದ್ದರು. ದೇಶದಲ್ಲಿ ಆಗ ಜನಸಂಖ್ಯೆಯಿಂದ ಬಡತನ, ನಿರುದ್ಯೋಗ, ಭ್ರಷ್ಟಾಚಾರ ಅಪರಾಧೀಕರಣ, ಉಗ್ರವಾದ, ಜಾತಿವಾದ, ಸಾಮಾಜಿಕ ಅಸಮಾನತೆ, ಭೀತಿಭಯ ಹತ್ತು ಹಲವು ಪಡೆಂಭೂತಗಳು ತಾಂಡವ ನೃತ್ಯವಾಡುತ್ತಿದ್ದವು. ಈ ಎಲ್ಲಾ ಸವಾಲುಗಳ ಮಧ್ಯೆ ವಿಭಜಿತ ಜನಾದೇಶದಿಂದ ಮೇಲೆದ್ದು ಬಂದು ಸಮ್ಮಿಶ್ರ ಸರ್ಕಾರವನ್ನೇ ಬದಲಾವಣೆಯ ಸಾಧನವನ್ನಾಗಿ ಉಪಯೋಗಿಸಿಕೊಂಡರು. ಐವತ್ತು ವರ್ಷಗಳ ದುರಾಡಳಿತದಿಂದ ಬರಡು ಬೆಂಗಾಡಾಗಿದ್ದ ನಾಡಿನಲ್ಲಿ ಅಮೃತ ಸಿಂಚನೆಯ ಗಂಗೆಯನ್ನು ಹರಿಸಿದ ಆಧುನಿಕ ಭಗೀರಥರಾಗಿದ್ದರು ಅಟಲ ಬಿಹಾರಿ ವಾಜಪೇಯಿ ಅವರು.
ಮೇ 11 ರಂದು ರಾಜಾಸ್ಥಾನದ ಪೋಖ್ರಾನ್‍ನ ಮರುಭೂಮಿಯಲ್ಲಿ ನಡೆಸಿದ ಅಣುಸ್ಫೋಟಗಳು ಭಾರತ ದೇಶದ ವಿರೋಧಿಗಳ ಎದೆಯಲ್ಲಿ ಭೀತಿಯ ಮೋಡಗಳನ್ನು ನಿರ್ಮಾಣ ಮಾಡಿ. ನಾಡಿನ ಜನ, ಭಾರತೀಯ ಸಂಜಾತ ವಿಶ್ವ ನಾಗರೀಕರಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು. ಇದು ಕವಿ ಹೃದಯಿ ಮುತ್ಸದ್ಧಿಯ ರಾಷ್ಟ್ರಪ್ರೇಮದ ಅವಿಷ್ಕಾರವಾಗಿತ್ತು. ವಾಜಪೇಯಿಯವರನ್ನು ಕಳೆದ ಕೆಲವು ದಶಕಗಳಿಂದ ಹತ್ತಿರದಿಂದ ನೋಡುವ ಭಾಗ್ಯ ನನಗೆ ದೊರಕಿದೆ.
ಪ್ರತಿ ಸಲ ಅವರೊಂದಿಗೆ ಒಡನಾಡುವಾಗಲೂ ನನ್ನಲ್ಲಿ ಅವರ ಬಗೆಗಿನ ಗೌರವ, ಪ್ರೀತಿ ಹಾಗೂ ಹೆಮ್ಮೆ ಇಮ್ಮಡಿಯಾಗುತ್ತಿತ್ತು. ಪ್ರತಿ ಸಲ ಅವರನ್ನು ಭೇಟಿ ಮಾಡಿದಾಗಲೂ ಅವರೊಂದು ಅಗಾಧವಾದ ಅನುಭವವನ್ನು ಮೊಗೆದು ಕೊಡುತ್ತಿದ್ದರು. ಅಟಲ್‍ಜಿಯವರ ಸರ್ಕಾರದಲ್ಲಿ ಅವರ ಕಿರಿಯ ಸಹೋದ್ಯೋಗಿಯಾಗಿ ಕೆಲಸ ಮಾಡುವ ಸದವಾಕಾಶ ನನಗೆ ದೊರೆತಿದ್ದು ನನ್ನ ಪಾಲಿನ ಪುಣ್ಯ ಎಂದೇ ನಾನು ಭಾವಿಸಿದ್ದೇನೆ. ಅತ್ಯಂತ ನಿರ್ಣಾಯಕ ವಿಷಯಗಳ ಬಗ್ಗೆ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರ, ಅದನ್ನು ತಗೆದುಕೊಳ್ಳುತ್ತಿದ್ದ ರೀತಿ, ವಿಷಯದ ಆಳಕ್ಕಿಳಿದು ಅದನ್ನು ಅಭ್ಯಸಿಸುತ್ತಿದ್ದ ವಿಧಾನ, ಸಮಸ್ಯೆಯ ಅರಿವಿನ ಬಗೆಗೆ ಅವರಿಗಿದ್ದ ವಿಶಾಲ ನೋಟ ಹಾಗೂ ದೂರದೃಷ್ಠಿ ಅನುಪಮವಾದುದು. ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಈ ಬೃಹತ್ ದೇಶದ ಒಂದು ದಿವ್ಯ ಸಂಕೇತವಾಗಿ ಅವರು ಕಂಗೊಳಿಸುತ್ತಾರೆ.
ಎಂತಹುದೇ ಸಂದರ್ಭವಿರಲಿ ಅಟಲ್‍ಜಿವರಯ ನಡೆ ನುಡಿ, ವಿಚಾರ ಹಾಗೂ ನಡವಳಿಕೆ ಆದರ್ಶಪ್ರಾಯ. ಅವರು ಏನೇ ಮಾಡಿದರೂ ಇತರರಿಗೆ ಒಂದು ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಬಲವಾಗಿ ಮೂಡಿಸಿದ್ದಾರೆ. ವಾಜಪೇಯಿ ಅವರ ಸರಕಾರ ದೂರದೃಷ್ಟಿತ್ವ ಹಾಗೂ ಜನಪರ ಕಾಳಜಿಯನ್ನು ಹೊಂದಿದ ಸರಕಾರವಾಗಿತ್ತು. ವಾಜಪೇಯಿ ಅವರ ಆಡಳಿತ ಅವಧಿ ಸುಶಾಸನದ ಅವಧಿ ಎಂದೇ ಹೇಳಲಾಗುತ್ತದೆ. ಅವರ ಹುಟ್ಟುಹಬ್ಬವನ್ನು ಭಾರತದ ಪ್ರಗತಿ ಹಾಗೂ ಅಭ್ಯಧಯಕ್ಕೆ ಅವರ ಕೊಡುಗೆ ಅಪಾರ. ಅದರಲ್ಲೂ ಕರ್ನಾಟಕ ರಾಜ್ಯದ ಅಭಿವೃದ್ದಿಗೆ ಅವರು ಸಾಲು ಸಾಲು ಕೊಡುಗೆಗಳನ್ನು ನೀಡಿದ್ದಾರೆ.
ಕಾವೇರಿ ನೀರಿನ ಹಂಚಿಕೆ, ಕೃಷ್ಣಾ ನೀರಾವರಿ ಯೋಜನೆಯ ಆಲಮಟ್ಟಿ ಅಣೆಕಟ್ಟೆ ಎತ್ತರದ ಹೆಚ್ಚಳ, ಹುಬ್ಬಳ್ಳಿಗೆ ನೈಋತ್ಯ ರೈಲ್ವೇ ವಲಯ ಕೇಂದ್ರ ಸ್ಥಾಪನೆ, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯ ವಿಚಾರವಾಗಿರಬಹುದು, ಬೆಂಗಳೂರಿಗೆ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವುದಾಗಿರಬಹುದು, ಮೆಟ್ರೋ ಯೋಜನೆ, ಬೆಂಗಳೂರಿಗೆ ಕಾವೇರಿ ನೀರಿನ ನಾಲ್ಕನೇ ಹಂತದ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಅನುಷ್ಠಾನಕ್ಕೆ ಅವರು ಮುತುವರ್ಜಿವಹಿಸಿದ್ದರು.
ಅಟಲ್‍ಜಿ ಈ ದೇಶದ ರಾಜಕಾರಣಕ್ಕೆ ಒಂದು ಮೇಲ್ಪಂಕ್ತಿ ಹಾಕಿಕೊಟ್ಟ ನಾಯಕ. ಅಟಲ್‍ಜಿ ಅವರು ಇಂದಿಗೂ ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ದ್ಯೋತಕವಾಗಿದ್ದಾರೆ. ಅವರು ಇಡೀ ದೇಶವೇ ಅಭಿಮಾನ ಪಡುವಂತಹ ಗಣ್ಯ ನೇತಾರ. ಇಂತಹ ಮುತ್ಸದ್ದಿ, ಅಜಾತ ಶತ್ರು, ಭಾರತೀಯ ಜನತಾ ಪಕ್ಷಕ್ಕೆ ಹಾಗೂ ದೇಶದ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ನಾಯಕರನ್ನು ಕಳೆದುಕೊಂಡಿರುವುದು ಬಹಳ ದುಖಃಕರ ಸಂಗತಿಯಾಗಿದೆ. ಬಾಬ್ಜೀ ಎಂದು ಕರೆಯಲ್ಪಡುತ್ತಿದ್ದ ಬಹುಮುಖ ವ್ಯಕ್ತಿತ್ವಕ್ಕೆ ನನ್ನ ನಮನಗಳು. ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿ ಅವರು ನಮ್ಮಲ್ಲೆರ ಹೃದಯದಲ್ಲಿ ಬೆಳಗಲಿದ್ದಾರೆ. ಅವರು ದೇಶಾದ್ಯಂತ ಕೋಟ್ಯಾಂತರ ಜನರನ್ನು ಅಗಲಿದ್ದಾರೆ. ಇವರ ಅಗಲಿಕೆ ನನಗೆ ವೈಯಕ್ತಿಕವಾಗಿ ಬಹಳ ದುಖಃವನ್ನು ಉಂಟುಮಾಡಿದೆ. ಅವರ ಸಚಿವ ಸಂಪುಟದಲ್ಲಿ ಕಿರಿಯ ಸಹದ್ಯೋಗಿಯಾಗಿ ಕಲಿತ ಪಾಠಗಳೇ ನನ್ನನ್ನು ನನ್ನ ಸಾರ್ವಜನಿಕ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವಂತೆ ಮಾಡಿದೆ. ಅಟಲ್ ಜೀ ಅವರ ಅಗಲಿಕೆಯಿಂದ ವಿಶ್ವಾದ್ಯಂತ ಅವರ ಅಭಿಮಾನಿಗಳಿಗೆ, ಭಾರತದ ಜನಪರ ಅಭಿವೃದ್ಧಿ ಪರ ರಾಜಕಾರಣಕ್ಕೆ ಹಾಗೂ ನನಗೂ ತುಂಬಲಾರದ ನಷ್ಟ.
(ಸಂಸದೀಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಕಂಡಂತೆ ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರಾಟ ದರ್ಶನ)
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv