ಬೆಂಗಳೂರು: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಜಿಲ್ಲೆಯಾದ್ಯಂತ ಜನರು ಸಂತಾಪ ಸೂಚಿಸಿದ್ದು, ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಗಲಿದ ಮಾಜಿ ಪ್ರಧಾನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಥಾಂಜಲಿ ಅರ್ಪಿಸಿದ್ದಾರೆ. ನಗರದ ಚರ್ಚ್ ರಸ್ತೆಯಲ್ಲಿನ ಕಾವೇರಿ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿಯಲ್ಲಿ ಸಾರ್ವಜನಿಕರು ಭಾಗವಹಿಸಿ ಅಗಲಿದ ಚೇತನಕ್ಕೆ ಸಂತಾಪ ಸೂಚಿಸಿದ್ದಾರೆ.
Advertisement
Advertisement
ಬೆಂಗಳೂರು ಹೊರವಲಯ ಆನೇಕಲ್ ನಲ್ಲಿ ವಾಜಪೇಯಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲಾ ರೈತ ಪರ ಸಂಘಟನೆಗಳಿಂದ ಆನೇಕಲ್ ತಾಲೂಕು ಕಚೇರಿಯ ಮುಂಭಾಗ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇತ್ತ ವಿಜಯಪುರದಲ್ಲಿ ಕೂಡ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ನಗರದ ಗಾಂಧಿಚೌಕ್ ನಲ್ಲಿ ಅಟಲ್ ಜಿ ಫೋಟೋ ಇಟ್ಟು ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
Advertisement
ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿ ಎದುರು ಭಾರತೀಯ ಜನತಾ ಪಕ್ಷದ ಅರ್ಧ ಧ್ವಜ ಹಾರಿಸಿ ಶೋಕಾಚರಣೆ ಮಾಡಿ, ವಾಜಪೇಯಿ ಭಾವಚಿತ್ರಕ್ಕೆ ಜಿಲ್ಲಾ ಬಿಜೆಪಿ ನಾಯಕರಿಂದ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ `ಅಮರ್ ರಹೇ ಅಮರ್ ರಹೇ ಅಟಲ್ ಜೀ ಅಮರ್ ರಹೇ’ ಎಂದು ಘೋಷಣೆ ಹಾಕಲಾಗಿದೆ. ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.
Advertisement
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರವಿರುವ ಫ್ಲೆಕ್ಸ್ ಗೆ ಹಾರಹಾಕಿ, ಮೇಣದಬತ್ತಿ ಹಚ್ಚಿ, `ಜಬ್ ತಕ್ ಸೂರಜ್ ಚಾಂದ್ ರಹೇಂಗೆ, ಅಟಲ್ ಜೀ ಅಮರ್ ರಹೇಂಗೆ’. ‘ಅಮರ್ ರಹೇ… ಅಮರ್ ರಹೇ… ಅಟಲ್ ಜೀ ಅಮರ್ ರಹೇ’ ಎಂದು ಘೋಷಣೆ ಹಾಕಲಾಗಿದೆ.
ಚಿನ್ನದ ನಾಡು ಕೋಲಾರ ನಗರದ ಕಾಲೇಜು ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 2003 ರಲ್ಲಿ ಚಿನ್ನದ ನಾಡಿಗೂ ತಮ್ಮ ಪಾದಸ್ಪರ್ಶ ಮಾಡಿದ್ದ ವಾಜಪೇಯಿ ಅವರ ಬೃಹತ್ ಕಟೌಟ್ ಗೆ ಪೂಜೆ ಸಲ್ಲಿಸಿ ಸಂತಾಪ ಸೂಚಿಸಲಾಗಿದೆ. ಹತ್ತಾರು ಜನ ಕಾರ್ಯಕರ್ತರು ಕ್ಯಾಂಡಲ್ ಹಿಡಿದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv