ಜೈಪುರ: ಇಲ್ಲಿನ ಐಐಎಸ್ ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಪರ್ವತಾರೋಹಣ ಹಾಗೂ ಜಿಪ್ ಲೈನಿಂಗ್ ಪ್ರಾತ್ಯಕ್ಷಿಕೆ ವೇಳೆ ಕಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಜೈಪುರ ನಿವಾಸಿಯಾದ ಅದಿತಿ ಸಾಂಗಿ ಮೃತ ವಿದ್ಯಾರ್ಥಿನಿ. ವಿಪರ್ಯಾಸವೆಂದರೆ ಮೃತ ವಿದ್ಯಾರ್ಥಿನಿಯ ತಂದೆ ತರಬೇತುದಾರರಲ್ಲಿ ಒಬ್ಬರಾಗಿದ್ದು ಅವರ ಕಣ್ಣೆದುರೇ ಅದಿತಿ ಸಾವನ್ನಪ್ಪಿದ್ದಾರೆ. ಅದಿತಿ ಕಟ್ಟಡದಿಂದ ಕೆಳಗೆ ಬಿದ್ದ ಕೂಡಲೇ ಅವರನ್ನ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಅದಿತಿ ಕೂಡ ತರಬೇತುದಾರರು ಹಾಗೂ ಪ್ರದರ್ಶಕರಾಗಿದ್ದರು. ಇವರ ತಂದೆ ಸುನಿಲ್ ತರಬೇತುದರರಾಗಿದ್ದು, ಈ ಹಿಂದೆ ಹಲವಾರು ಬಾರಿ ಐಐಎಸ್ ವಿಶ್ವವಿದ್ಯಾಲಯದಲ್ಲಿ ಇಂತಹದ್ದೇ ಪ್ರಾತ್ಯಕ್ಷಿಕೆಗಳು ಹಾಗೂ ತರಗತಿಗಳನ್ನ ನೀಡಿದ್ದಾರೆ.
ನಡೆದಿದ್ದೇನು?: ಜಿಪ್ ಲೈನಿಂಗ್ ಪ್ರಾತ್ಯಕ್ಷಿಕೆ ತೋರಿಸಲಾಗುತ್ತಿತ್ತು. ಎತ್ತರದ ಸ್ಥಳದಲ್ಲಿ ಒಂದು ಜಾಗದಿಂದ ಮತ್ತೊಂದಕ್ಕೆ ಹೇಗೆ ಹಗ್ಗದ ಸಹಾಯದಿಂದ ಹೋಗಬಹುದು ಅನ್ನೋದನ್ನ ಹೇಳಿಕೊಡಲಾಗ್ತಿತ್ತು. ಈ ವೇಳೆ ಅದಿತಿ ತನ್ನ ಒಂದು ಪ್ರಾತ್ಯಕ್ಷಿಕೆ ಮುಗಿಸಿದ್ರು. ಸುರಕ್ಷಾತೆಗಾಗಿ ಬಳಸುವ ಪಟ್ಟಿಯನ್ನ ತೆಗೆದಿದ್ದರು. ಮತ್ತೊಬ್ಬರು ಜಿಪ್ ಲೈನಿಂಗ್ ಮಾಡುತ್ತಿದ್ದರು. ಆದ್ರೆ ವಿಶ್ವವಿದ್ಯಾಲಯದ ಟೆರಸ್ ಮೇಲೆ ನಿಂತಿದ್ದ ಅದಿತಿ ನಿಯಂತ್ರಣ ಕಳೆದುಕೊಂಡು 6 ಮಹಡಿಗಳ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಜೋರಾಗಿ ಚೀರಾಡಿದ್ದಾರೆ. ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನ ವಿಡಿಯೋ ಮಾಡಿದ್ದು, ಈ ವೇಳೆ ಅದಿತಿ ಕೆಳಗೆ ಬಿದ್ದ ದೃಶ್ಯ ಕೂಡ ಸೆರೆಯಾಗಿದೆ.
ಅದಿತಿ ಸಾವು ದುರದೃಷ್ಟಕರ. ಇದಕ್ಕೆ ಯಾರನ್ನೂ ದೂಷಿಸಬಾರದು ಎಂದು ಐಐಎಸ್ ವಿಶ್ವವಿದ್ಯಾಲಯ ಹೇಳಿಕೆ ನೀಡಿದೆ. ಅದಿತಿ ಒಂದು ಚಟುವಟಿಕೆಯನ್ನ ಮುಗಿಸಿದ್ದು, ಅವರ ಸುರಕ್ಷಾ ಸಾಧನವನ್ನ ಕಳಚಿದ್ದರು. ಮತ್ತೊಮ್ಮೆ ಬೇರೆ ಚಟುವಟಿಕೆ ಮಾಡಿದ್ದರೆ ಅದನ್ನ ಧರಿಸುತ್ತಿದ್ದರು. ಹೀಗಾಗಿ ಯಾರನ್ನೂ ದೂಷಿಸುವಂತಿಲ್ಲ. ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
https://www.youtube.com/watch?v=9KKENwMaFZw