300 ಅಡಿ ಕಂದಕಕ್ಕೆ ಉರುಳಿದ ಬಸ್ – 33 ಮಂದಿ ಸ್ಥಳದಲ್ಲೇ ಸಾವು

Public TV
1 Min Read
Mahabaleshwar accident 1

ಮುಂಬೈ: ಬಸ್‍ವೊಂದು 300 ಅಡಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಂಬೇನಾಲಿ ಘಾಟ್ ಪ್ರದೇಶದಲ್ಲಿ ನಡೆದಿದೆ.

ಬಸ್ ಅಪಘಾತದ ಬಳಿಕ ಬಸ್‍ನಲ್ಲಿದ್ದ ವ್ಯಕ್ತಿಯೊಬ್ಬರು ಫೋನ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಸ್ ಕಂದಕಕ್ಕೆ ಉರುಳಿದ ಕುರಿತು ಮಾಹಿತಿ ಪಡೆದ ಎನ್‍ಡಿಆರ್ ಎಫ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಸಹ ಸಹಕಾರ ನೀಡಿದ್ದು, ಘಟನೆಯಲ್ಲಿ ಹೆಚ್ಚಿನ ಜನರು ಗಾಯಗೊಂಡಿರುವ ಸಾಧ್ಯತೆ ಇದೆ. ಬಸ್ಸಿನಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮಹಾರಾಷ್ಟ್ರ ದಪೋಲಿ ಕೃಷಿ ವಿಶ್ವವಿದ್ಯಾಲಯದ ಪ್ರವಾಸದ ಬಸ್ ಆಗಿದ್ದು, ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಾಧ್ಯಾಪಕರು ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.

ಕಳೆದ ತಿಂಗಳು ಉತ್ತರಾಖಂಡ್ ಪೌರಿ ಜಿಲ್ಲೆಯಲ್ಲಿ 200 ಮೀಟರ್ ಕಂದಕಕ್ಕೆ ಬಸ್ ಉರುಳಿಬಿದ್ದು 48 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ.

Share This Article