ಮಂಡ್ಯ: ಜಿಲ್ಲೆಯ ಲೋಕಸಭಾ ಉಪಚುನಾವಣೆ ಬೆನ್ನಲ್ಲೇ ರಮ್ಯಾ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ ವಿರುದ್ಧ ತಿರುಗಿಬಿದ್ದಿದ್ದು, ರಮ್ಯಾ ಸೋಲಿಗೆ ಕಾರಣರಾದ ಎಲ್.ಆರ್ ಶಿವರಾಮೇಗೌಡರಿಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕುವುದರ ಜೊತೆಗೆ ಸಾಮಾಜಿಕ ಜಾಲತಾಣವನ್ನು ಶಿವರಾಮೇಗೌಡ ವಿರುದ್ಧ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಈಗ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್ ಶಿವರಾಮೇಗೌಡ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಶಿವರಾಮೇಗೌಡ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಅವರು ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಆದರೆ ಈ ವೇಳೆ ರಮ್ಯಾರನ್ನು ಸೋಲಿಸಲು ಎಲ್.ಆರ್ ಶಿವರಾಮೇಗೌಡ ಮುಖಂಡರ ಸಭೆ ನಡೆಸಿದ್ದರು.
Advertisement
Advertisement
ಜೆಡಿಎಸ್ ಪಕ್ಷ ಸೇರಿದ ನಂತರ ಬಹಿರಂಗ ಸಭೆಯಲ್ಲಿ ರಮ್ಯಾರನ್ನು ಫ್ಲಯಿಂಗ್ ಸ್ಟಾರ್ ಎಂದು ಜರಿದು ಅವರನ್ನು ಸೋಲಿಸಿದ್ದರ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಈ ಹೇಳಿಕೆಯನ್ನಿಟ್ಟುಕೊಂಡು ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳು ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ.
Advertisement
Advertisement
ಉಪಚುನಾವಣೆಗೆ ಕಾರಣ ಎಲ್.ಆರ್ ಶಿವರಾಮೇಗೌಡ ಅಂದು ಪಕ್ಷದ್ರೋಹಿ ಕೆಲಸ ಮಾಡದಿದ್ದರೆ ರಮ್ಯಾ ಗೆಲ್ಲುತ್ತಿದ್ದರು. ರಮ್ಯಾ ವಿರುದ್ಧವಾಗಿ ಕೆಲಸ ಮಾಡಿದ ಜೊತೆಗೆ ಅವರನ್ನು ಸೋಲಿಸಿದ್ದು ನಾನೇ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ರೀತಿ ಹೇಳಿ ರಮ್ಯಾ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ತಂದಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಕ್ಷ ದ್ರೋಹಿಯನ್ನು ಒಪ್ಪಿಕೊಂಡು ನಾವು ಮತ ಹಾಕಲ್ಲ ಅಂತಾ ರಮ್ಯಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೊಬ್ಬರು ಜೆಡಿಎಸ್ ಅಭ್ಯರ್ಥಿ ಶೀವರಾಮೇಗೌಡರ ವಿರುದ್ಧ ಆಕ್ರೋಶ ಹೊರಹಾಕಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ನಾವು ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಓಟ್ ಹಾಕಿದವರಲ್ಲ. ರಮ್ಯಾ, ಅಂಬರೀಶ್ ಸೋಲಿಸಿದವನು ಶೀವರಾಮೇಗೌಡ. ನಾವು ಜೆಡಿಎಸ್‍ಗೆ ವಿರೋಧವಾಗಿ ಮಾತ್ರ ವೋಟ್ ಹಾಕೋದು. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಬಿಜೆಪಿಗೆ ವೋಟ್ ಹಾಕಲು ತಯಾರಿದ್ದೇವೆ ಅಂತಿದ್ದಾರೆ. ಜೆಡಿಎಸ್ ಪಕ್ಷದ ಭದ್ರಕೋಟೆ ಮಂಡ್ಯದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ನೀಡುತ್ತಿರುವ ಹೇಳಿಕೆಗಳು ಎರಡು ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv