ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ತಮಿಳುನಾಡು ಸರ್ಕಾರ ಹೇಳಿದೆ.
ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಿನ್ನೆಲೆ ಪ್ರಕರಣ ಸಂಬಂಧ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕಳೆದ ವಿಚಾರಣೆ ವೇಳೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಗೆ ಉತ್ತರಿಸಿರುವ ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣ ಬಗ್ಗೆ ನಿರ್ಧರಿಸುವ ಯಾವುದೇ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲ ಎಂದು ಹೇಳಿದೆ.
Advertisement
Advertisement
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸುಪ್ರೀಂಕೋರ್ಟ್ ನೀಡಿದ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು, ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಬೇಕು. ಈ ಪ್ರಾಧಿಕಾರಕ್ಕೆ ಅಣೆಕಟ್ಟು ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸುವ ಅಧಿಕಾರ ಇಲ್ಲ. ಹೀಗಾಗಿ ತನ್ನ ಸಭೆಯಲ್ಲಿ ಅಣೆಕಟ್ಟು ನಿರ್ಮಾಣದ ಬಗ್ಗೆ ಅಥವಾ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ ಮಾಡಬಾರದು ಎಂದು ಹೇಳಿದೆ.
Advertisement
Advertisement
ಕಳೆದ ಒಂಭತ್ತು ವರ್ಷದಲ್ಲಿ ಐದು ವರ್ಷ ಕರ್ನಾಟಕ ಸಮರ್ಪಕ ನೀರು ಹರಿಸದೇ ತಮಿಳುನಾಡಿಗೆ ಮೋಸ ಮಾಡಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಕೆಳ ಹಂತದ ರಾಜ್ಯಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣ ಮಾಡಬಾರದು ಎಂದು ತನ್ನ ಅಫಿಡೆವಿಟ್ ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ- ಜು. 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಇನ್ನು ಕರ್ನಾಟಕವೂ ಈ ಬಗ್ಗೆ ಉತ್ತರಿಸಿದ್ದು ಮೇಕೆದಾಟು ಯೋಜನೆ ಕರ್ನಾಟಕದ ಯೋಜನೆಯಾಗಿದ್ದು ತಮಿಳುನಾಡು ಅನುಮತಿ ಅಗತ್ಯ ಇಲ್ಲ. ಇದು ಕುಡಿಯುವ ನೀರು ಮತ್ತು ಹೈಡ್ರೋ ಪವರ್ ಪ್ರಾಜೆಕ್ಟ್ ಯೋಜನೆಯಾಗಿದೆ. ಇದರಿಂದ ತಮಿಳುನಾಡಿಗೆ ನೀರಿನ ಕೊರತೆಯಾಗುವುದಿಲ್ಲ. ನೀರಿನ ಕೊರತೆಯ ಬಗ್ಗೆ ಪ್ರಾಧಿಕಾರ ಸಭೆಯಲ್ಲಿ ಚರ್ಚಿಸಬಹುದು ಎಂದು ತಿಳಿಸಿದೆ.
ಮೇಕೆದಾಟು ಅಣೆಕಟ್ಟು ನಿರ್ಮಿಸಲು ಹೊರಟಿರುವ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಡಿಪಿಆರ್ ಬಗ್ಗೆ ಚರ್ಚಿಸಲು ಅನುಮತಿ ಕೇಳಿತ್ತು. ಇದಕ್ಕೆ ಪ್ರಾಧಿಕಾರ ಒಪ್ಪಿಕೊಂಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆಸಿದಂತೆ ಸೂಚಿಸಲು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಬಗ್ಗೆ ಸೋಮವಾರ ವಿಸ್ತೃತ ವಿಚಾರಣೆ ನಡೆಯಲಿದೆ.