ವಾಷಿಂಗ್ಟನ್: ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Astronaut Sunita Williams) ಆರೋಗ್ಯದ ಬಗ್ಗೆ ನಾನಾ ಅನುಮಾನಗಳು ಮೂಡುತ್ತಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಮೊದಲು ದಷ್ಟಪುಷ್ಟರಾಗಿದ್ದ ಸುನಿತಾ ವಿಲಿಯಮ್ಸ್ ಇದೀಗ ವಿಪರೀತ ಸಣ್ಣ ಆಗಿದ್ದಾರೆ.
ಸಾಕಷ್ಟು ಸನ್ನದ್ಧತೆ ಇಲ್ಲದೇ, ಸುದೀರ್ಘ ಕಾಲ ಭಾರ ರಹಿತ ಸ್ಥಿತಿಯಲ್ಲಿರುವ ಕಾರಣ ಅವರ ಆರೋಗ್ಯ (Health) ಸ್ಥಿತಿ ಹದಗೆಟ್ಟಿದೆ ಎಂಬು ಸುದ್ದಿ ಹರಿದಾಡಿದೆ. ಈ ಸುದ್ದಿಯನ್ನು ನಾಸಾ (NASA) ಅಲ್ಲಗಳೆದಿದೆ. ಸುನಿತಾ ವಿಲಿಯಮ್ಸ್ ಆರೋಗ್ಯವಾಗಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?
ಜೂನ್ ತಿಂಗಳಲ್ಲಿ 8 ದಿನಗಳ ಬಾಹ್ಯಾಕಾಶ ಯಾತ್ರೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಬೋಯಿಂಗ್ ಸ್ಟಾರ್‌ಲೈನರ್ ಬಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ.
ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ಹಾರಿಸಲಾಗಿದ್ದ ಸ್ಪೇಸ್ ಎಕ್ಸ್ ಕ್ರ್ಯೂ9 ಮಿಷನ್ (Crew9) ಯಶಸ್ವಿಯಾಗಿ ಸೆಪ್ಟೆಂಬರ್ 30 ರಂದು ಅಂತರಿಕ್ಷ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಕ್ರ್ಯೂ 9 ಮಿಷನ್ ಮೂಲಕ ಸುಮಾರು 200 ವೈಜ್ಞಾನಿಕ ಪ್ರಯೋಗಗಳನ್ನು ಗಗನಯಾನಿಗಳು ನಡೆಸಲಿದ್ದಾರೆ.
ಸ್ಟಾರ್‌ಲೈನರ್ ಸಂಸ್ಥೆ ಕಳಿಸಿದ್ದ ಅಂತರಿಕ್ಷ ನೌಕೆಯಲ್ಲಿ ತಾಂತ್ರಿಕ ಲೋಪ ಕಂಡು ಬಂದ ಕಾರಣ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲು ಸಾಧ್ಯವಾಗದೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದಿದ್ದು ಫೆಬ್ರವರಿಯಲ್ಲಿ ಭೂಮಿಗೆ ಮರಳಲಿದ್ದಾರೆ.