Connect with us

Bengaluru City

30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?

Published

on

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿರುವಾಗಲೇ ಗ್ರಹಣ ಜನರ ನಿದ್ದೆಗೆಡಿಸಿತ್ತು. ಈಗ ಶನಿಯ ಸರದಿ, ಇಂದು ಶನಿಮೌನಿ ಅಮಾವಾಸ್ಯೆ. ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮದ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಇದನ್ನು ಶನಿಮೌನಿ ಅಮಾವಾಸ್ಯೆ ಅಂತಲೇ ಕರೆಯಲಾಗುತ್ತದೆ.

ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ- ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ. ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸಲಿರುವ ಶನಿಯ ಪಥ ಬದಲಾವಣೆ ಕೆಲ ರಾಶಿಗಳ ಮೇಲಂತೂ ಗಾಢ ಪರಿಣಾಮ ಬೀರಲಿದೆ. ಕೆಲ ರಾಶಿಗೆ ಮಿಶ್ರಫಲ, ಇನ್ನೂ ಕೆಲ ರಾಶಿಯವರಿಗೆ ಶನಿ ಪಥ ಬದಲಾವಣೆ ಶುಭ ಫಲವನ್ನು ತರಲಿದೆ.

ಧನಸ್ಸು, ಮಕರ ರಾಶಿಗೆ ಹಾಗೂ ಕುಂಭ ಸಾಡೇ ಸಾತಿ ಶುರುವಾಗಲಿದೆ. ಶನಿ ಹೆಗಲೇರಲಿದ್ದಾನೆ, 2020 ರಿಂದ 2022 ರವರೆಗೆ ಶನಿಪ್ರಭಾವ ಇರಲಿದೆ. ಹಾಗಾಗಿ ಈ ಮೂರು ರಾಶಿಯವರ ಮೇಲಂತೂ ಶನಿ ಆಟ ಶುರುವಾಗಲಿದೆ.

ಯಾವೆಲ್ಲ ರಾಶಿಗೆ ಶನಿಪಥ ಬದಲಾವಣೆ ಯಾವ ರೀತಿ ತೊಂದರೆ ತರಲಿದೆ, ಯಾವ ರಾಶಿಗೆ ಶುಭವಾಗಲಿದೆ, ಶನಿ ಅವಕೃಪೆಯಿಂದ ಪಾರಾಗುವ ವಿಧಾನ ಯಾವುದು ಅಂತಾ ನೋಡೋದಾದರೆ:

1. ಮೇಷ: ಉದ್ಯೋಗದಲ್ಲಿ ಸಮಸ್ಯೆ, ಖರ್ಚು-ವೆಚ್ಚ ಹೆಚ್ಚಳ, ಶತ್ರು ಕಾಟದ ಸಮಸ್ಯೆ, ಅನ್ಯರೊಂದಿಗೆ ಸಹವಾಸ ಬೆಳೆಸುವ ಮೊದಲು ಎಚ್ಚರಿಕೆ ಅಗತ್ಯ.

2. ವೃಷಭ: ಶನಿ ಪಥ ಬದಲಾವಣೆಯಿಂದ ಮಿಶ್ರಫಲ, ಕುಟುಂಬದಲ್ಲಿ ಕಲಹ, ಮಾನಸಿಕ ಚಿಂತೆ, ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ಬಂಧು-ಮಿತ್ರರಿಂದ ಉತ್ತಮ ಸಹಕಾರ.

3. ಮಿಥುನ: ಅಷ್ಟಮ ಶನಿಯ ಪ್ರಭಾವದಿಂದ ಕೆಲಸ ಕಾರ್ಯಕ್ಕೆ ಅಡೆತಡೆ, ಮಾನಹಾನಿ, ಧನಹಾನಿಯಾಗುವ ಸಾಧ್ಯತೆ, ಆತ್ಮೀಯರೇ ಶತ್ರುವಾಗಬಹುದು, ಯಾರಿಂದಲೂ ಸಾಲ ಪಡೆಯುವುದು- ಕೊಡುವುದು ಬೇಡ.

4. ಕಟಕ: ವೈಯಕ್ತಿಕ ಸಮಸ್ಯೆ ಹೆಚ್ಚಾಗಲಿದೆ, ಕುಟುಂಬದ ಹಿರಿಯರೊಂದಿಗೆ, ಆಪ್ತರೊಂದಿಗೆ ಕಲಹ ಸಾಧ್ಯತೆ, ವೃತ್ತಿಯಲ್ಲಿ ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆಯಾಗುವ ಸಾಧ್ಯತೆ

5. ಸಿಂಹ: ಶನಿಪಥ ಬದಲಾವಣೆ ಶುಭ ಫಲ ತರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದಾರೆ, ಕೋಟು ಕಚೇರಿಯ ಕೆಲಸದಲ್ಲಿ ಜಯ, ಆರೋಗ್ಯ ಚೆನ್ನಾಗಿರುತ್ತೆ, ಆರ್ಥಿಕ ಅಭಿವೃದ್ಧಿ, ಹೊಸ ಯೋಜನೆ ಆರಂಭಿಸೋದಾದ್ರೇ ಈ ವರ್ಷವೇ ಉತ್ತಮ.

6. ಕನ್ಯಾ: ಶನಿಪಥ ಬದಲಾವಣೆಯಿಂದಾಗಿ ಸ್ವಲ್ಪ ಕಷ್ಟ ಎದುರಿಸಬೇಕಾಗುತ್ತದೆ. ಹಣದ ಕೊರತೆ ಎದುರಿಸಬೇಕಾಗುತ್ತೆ. ಅಪಘಾತದ ಸಾಧ್ಯತೆ ಇದ್ದು ವಾಹನದಲ್ಲಿ ಹೋಗುವಾಗ ಎಚ್ಚರವಿರಲಿ, ಸಾಲ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು.

7. ತುಲಾ: ಅದೆಷ್ಟೇ ಕೆಲಸ ಮಾಡಿದರೂ ಯಶಸ್ಸು ಸಿಗಲಾರದು, ಆರೋಗ್ಯ ಸಮಸ್ಯೆಯಿಂದಾಗಿ ಮಾನಸಿಕ ಕಿರಿಕಿರಿ, ವ್ಯರ್ಥ ಆರೋಪ ನಿಂದನೆಗೆ ಗುರಿಯಾಗಬೇಕಾಗುತ್ತೆ.

8. ವೃಶ್ಚಿಕ: ಶನಿಪಥ ಬದಲಾವಣೆ ಉತ್ತಮ ಫಲಾಫಲ ತರಲಿದೆ. ಶತ್ರುಗಳ ಜೊತೆ ವಿಜಯ ಸಾಧಿಸಲಿದ್ದೀರಿ, ಸರ್ವ ಕಾರ್ಯದಲ್ಲೂ ವಿಜಯ ಸಿಗಲಿದೆ, ವೃತ್ತಿಯಲ್ಲಿ ಉನ್ನತ ಸ್ಥಾನ, ಅಭಿವೃದ್ಧಿ ಸಿಗಲಿದೆ, ಕುಟುಂಬದಲ್ಲಿ ಶುಭಕಾರ್ಯ ನಡೆಯಲಿದೆ.

9. ಧನಸ್ಸು: ಆರೋಗ್ಯ ಸಮಸ್ಯೆ ಕಾಡಲಿದೆ, ಕೆಲಸದಲ್ಲಿ ನಿರಾಸಕ್ತಿ ಸಾಧ್ಯತೆ, ಮಾತಿನಲ್ಲಿ ಎಚ್ಚರ ವಹಿಸಿದರೆ ಕಲಹವನ್ನು ತಡೆಯಬಹುದು, ಶುಭ ಕಾರ್ಯಗಳಿಗೆ ವಿಘ್ನ ಶುರುವಾಗಲಿದೆ.

10. ಮಕರ: ಮಕರಕ್ಕೆ ಶನಿ ಅಧಿಪತಿ. ಇದು ಕಠಿಣ ಸಮಯವಾಗುತ್ತದೆ. ಮಾನಹಾನಿ, ಅಪಕೀರ್ತಿ ನಿಂದನೆಗೆ ಒಳಗಾಗುವಿರಿ, ಯಾವುದೇ ಕೆಲಸ ಕಾರ್ಯ ಕೈಹಿಡಿಯಲಾರದು, ಹೊಸಯೋಜನೆಯ ಚಿಂತನೆಯೇ ಬೇಡ, ಬಂಧುಗಳೊಂದಿಗೆ ಕಲಹ, ಆತ್ಮೀಯರು ಶತ್ರುಗಳಾಗಿ ಬದಲಾಗುವ ಸಾಧ್ಯತೆ ಇದೆ.

11. ಕುಂಭ: ಕೆಲಸಕ್ಕೆ ವಿಘ್ನವಾಗಲಿದೆ. ಶನಿಕಾಟದಿಂದ ಯಾವ ಶುಭಕಾರ್ಯವೂ ನಡೆಯಲ್ಲ. ಕಲಹ ಗಲಾಟೆಯಿಂದ ಸಾಧ್ಯವಾದಷ್ಟು ದೂರ ಉಳಿಯಿರಿ. ಯಾವ ಉತ್ತಮ ಕೆಲಸವನ್ನು ನಿರೀಕ್ಷೆ ಮಾಡುವುದು ಬೇಡ.

12. ಮೀನ: ಶನಿಪಥ ಬದಲಾವಣೆ ಶುಭಫಲ ಸಿಗಲಿದೆ. ಉನ್ನತ ಪದವಿ ಪ್ರಾಪ್ತಿಯಾಗಲಿದೆ, ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ, ಹಣಕಾಸಿನ ವಿಚಾರದಲ್ಲಿ ಯಾವ ತೊಂದರೆಯೂ ಆಗಲಾರದು.

Click to comment

Leave a Reply

Your email address will not be published. Required fields are marked *

www.publictv.in