ಚಿಕ್ಕಮಗಳೂರು: ಜ್ಯೋತಿಷ್ಯಕ್ಕೆ ಹೆದರಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಹೊರಟು ಹೋದ ಘಟನೆ ಜಿಲ್ಲೆಯ ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಶಿಗುವಾನಿ ಗ್ರಾಮಸ್ಥರೇ ಮೂಢನಂಬಿಕೆಗೆ ಒಳಗಾದವರು. ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ಹಾವುಗೊಲ್ಲರು, ಹಕ್ಕಿಪಿಕ್ಕಿ ಕುಟುಂಬಗಳು ವಾಸವಾಗಿದ್ದವು. ಆದರೆ ಕಳೆದ 8 ದಿನಗಳಿಂದ 25 ಪುರುಷರು, ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.
Advertisement
ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಯಿತು.
Advertisement
Advertisement
ಕೊನೆಯ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದರಂತೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಆಗಿದೆ. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
Advertisement
ಹಾವು ಹಿಡಿಯುವುದು, ಹಕ್ಕಿಪುಕ್ಕ ಸೇರಿಸಿ ಮಾರುವುದು ಶಿಗುವಾನಿ ಗ್ರಾಮಸ್ಥರ ಮೂಲ ವೃತ್ತಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಗಾರೆ ಕೆಲಸ, ಕಾಫಿ ತೋಟ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿರಂತರ ಸಾವಿನ ಸಂಗತಿಯಿಂದ ಬೆಚ್ಚಿಬಿದ್ದು ಗ್ರಾಮವನ್ನು ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರು. ಸದ್ಯ ಅವರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎನ್ನಲಾಗುತ್ತಿದೆ.