ಕಲಬುರಗಿ: ಊಟದ ಬಿಲ್ ಕೊಡಿ ಎಂದು ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಏರ್‌ಲೈನ್ಸ್ ದಾಬಾದಲ್ಲಿ ಕಳೆದ ಮಂಗಳಾವಾರ ಈ ಘಟನೆ ನಡೆದಿದೆ. ಮಧ್ಯಾಹ್ನದ ಸುಮಾರಿಗೆ ಕಲಬುರಗಿ ಪಟ್ಟಣದ ಶಕೀಲ್ ಮತ್ತು ಆತನ ಸ್ನೇಹಿತರು ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ವಾಪಸ್ ಬರುವಾಗ ಡಾಬಾ ಮಾಲೀಕ ಅಬ್ದುಲ್ ಲತೀಪ್ ಬಿಲ್ ಕೊಡಿ ಎಂದು ಶಕೀಲ್ ಹಾಗೂ ಆತನ ಸ್ನೇಹಿತರನ್ನು ಕೇಳಿದರು.
ಹಣ ಕೇಳಿದ್ದಕ್ಕೆ ಸಿಟ್ಟಾದ ಶಕೀಲ್ ಮತ್ತು ಆತನ ಸ್ನೇಹಿತರು ಡಾಬಾ ಮಾಲೀಕ ಅಬ್ದುಲ್ ಲತೀಪ್ ನ ಮೇಲೆ 10ಕ್ಕೂ ಹೆಚ್ಚು ಜನರಿದ್ದ ಈ ತಂಡ, ಬಿಯರ್ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಶಕೀಲ್ ಹಾಗೂ ಆತನ ಸ್ನೇಹಿತರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ ಲತೀಪ್ ರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತಂತೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.