ಹೊಸೂರು: ರಾಜ್ಯದ (Bengaluru) ಗಡಿಭಾಗ ತಮಿಳುನಾಡಿನ ಹೊಸೂರು ನಗರದಲ್ಲಿ ಘನಘೋರ ಘಟನೆ ನಡೆದುಹೋಗಿದೆ. ಕುಡಿದ ನಶೆಯಲ್ಲಿ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸದ್ಯ ಹೊಸೂರು ಪೊಲೀಸರು (Hosur Police) ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ (Assistant Labor Inspector) ಶಿವಮೂರ್ತಿ (54) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಬಂಧಿತರು. ಇದನ್ನೂ ಓದಿ: ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ – ಪುಟ್ಟ ಮಕ್ಕಳಿಬ್ಬರು ಅನಾಥ!
ಬಂಧಿತರಾಗಿರುವ ಮೂವರು ಕಾಲೇಜು ವಿದ್ಯಾರ್ಥಿಗಳು (College Students) ಮೊದಲು ವಾಹನವೊಂದಕ್ಕೆ ಗುದ್ದಿದ್ದು, ನಂತರ ಬೇಕಂತಲೇ ಶಿವಮೂರ್ತಿ (54) ಎನ್ನುವವರ ಮೇಲೆ ಕಾರು ಹರಿಸಲಾಗಿದೆ. ಅಪಘಾತದ ಬಳಿಕ ಜನರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಶಿವಮೂರ್ತಿ ಹೊಸೂರಿನ ಅಣ್ಣೈ ಅರವಿಂದ್ ನಗರದ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕುಪಿತಗೊಂಡ ಶಿವಮೂರ್ತಿ ಮತ್ತು ಕುಟುಂಬಸ್ಥರು ಮನೆಯಿಂದ ಹೊರಬಂದು ಪ್ರಶ್ನಿಸಿದ್ದಾರೆ. ಬಳಿಕ ಪರಸ್ಪರ ವಾಗ್ವಾದ ಜೋರಾಗಿದೆ. ಇಷ್ಟಕ್ಕೆ ಆರೋಪಿಗಳು ಏಕಾಏಕಿ ಕಾರಿನಿಂದ ಡೆಡ್ಲಿ ಆಕ್ಸಿಡೆಂಟ್ ಮಾಡಿದ್ದಾರೆ.
ಕಾರನ್ನ ಏಕಾಏಕಿ ಮುಂದೆ ಚಲಾಯಿಸಿ ಶಿವಮೂರ್ತಿ ಮೇಲೆ ಹರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಮತ್ತು ಮೊಮ್ಮಗ ಕೂಡ ಗಾಯಗೊಂಡಿದ್ದು, ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ಅಪಘಾತ – ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಸದ್ಯ ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಹಾಗೂ ಹರೀಶ್ (19) ಎಂಬ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಈ ಕುರಿತು ಹೊಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

