ಬೆಂಗಳೂರು : ಸಾಮಾನ್ಯವಾಗಿ ಸಂಪುಟದ ಸಚಿವರನ್ನು ಗೆಲುವಿನ ಕುದುರೆಗೆ ಹೋಲಿಸುತ್ತಾರೆ. ಸೋಲರಿಯದ ಹಾಗೂ ಮತ್ತೆ ಗೆಲ್ಲುವಂತಹ ಅಭ್ಯರ್ಥಿಗಳೆಂದು ಪರಿಗಣಿಸಿ ಸಿಎಂ ಬೊಮ್ಮಾಯಿ (Basavaraja Bommai) ಸಂಪುಟದ ಅನೇಕ ಸಚಿವರಿಗೆ (Minister) ಈ ಬಾರಿ ಬಿಜೆಪಿ ಟಿಕೇಟ್ ನೀಡಲಾಗಿತ್ತು. ಆದರೆ, ಮತದಾರರ ವಿಶ್ವಾಸ ಗೆಲ್ಲುವಲ್ಲಿ ಅನೇಕ ಸಚಿವರು ವಿಫಲರಾಗಿದ್ದಾರೆ.
Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಂಡು ಬಿಜೆಪಿಗೆ ಶಾಕ್ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಿದ್ದಾಜಿದ್ದಿ ಕಣವಾಗಿದ್ದ ಮುಧೋಳ ಕ್ಷೇತ್ರದಲ್ಲಿ ಮಾಜಿ ಡಿಸಿಎಂ, ಸಚಿವ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ 70,478 ಮತಗಳನ್ನು ಪಡೆಯುವುದರ ಮೂಲಕ ಕಾರಜೋಳ ಅವರನ್ನು ಸೋಲಿಸಿದ್ದಾರೆ. ಕಾರಜೋಳ ಈ ಬಾರಿ 54,082 ಮತಗಳನ್ನು ಪಡೆದಿದ್ದು, 16396 ಅಂತರದಲ್ಲಿ ಕಾರಜೋಳ ಸೋತಿದ್ದಾರೆ.
Advertisement
Advertisement
ಚಿಕ್ಕಬಳ್ಳಾಪೂರ ಕ್ಷೇತ್ರವು ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿತ್ತು. ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದ ಪ್ರದೀಪ್ ಈಶ್ವರ್ ಸ್ಪರ್ಧಿಸಿದ್ದರು. ಅಚ್ಚರಿ ಎನ್ನುವಂತೆ ಪ್ರದೀಪ್ ಗೆದ್ದು, ಸಚಿವರನ್ನೇ ಸೋಲಿಸಿದ್ದಾರೆ. ಪ್ರದೀಪ್ ಅವರು 85755 ಮತಗಳನ್ನು ಪಡೆದಿದ್ದರೆ, ಕೆ.ಸುಧಾಕರ್ 74068 ಮತಗಳನ್ನು ಪಡೆದು ಸೋಲನ್ನೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 20 ಮುನ್ನಡೆ LIVE Updates
Advertisement
ಸಚಿವ ಹಾಲ್ಲಪ್ಪ ಆಚಾರ್ಯ ಯಲಬುರ್ಗ ಕ್ಷೇತ್ರದಿಂದ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಪ್ರಬಲ ಸ್ಪರ್ಧಿಯಾಗಿದ್ದ ಬಸವರಾಜ ರಾಯರೆಡ್ಡಿಯನ್ನು ಸೋಲಿಸುವ ಪಣತೊಟ್ಟಿದ್ದರು. ಆದರೆ, ಈ ಬಾರಿ ಮತದಾರ ರಾಯರೆಡ್ಡಿಗೆ ಮಣೆ ಹಾಕಿದ್ದಾನೆ. ಬಸವರಾಜ ರಾಯರೆಡ್ಡಿ 92508 ಮತಗಳನ್ನು ಪಡೆದಿದ್ದರೆ, ಹಾಲಪ್ಪ 75461 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಕೆ.ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ ನಾರಾಯಣಗೌಡ ಕೂಡ ಅಚ್ಚರಿ ಎನ್ನುವಂತೆ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಿ.ಎಲ್. ದೇವರಾಜ್, ಜೆಡಿಎಸ್ ಪಕ್ಷದ ಎಚ್.ಟಿ. ಮಂಜು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮಂಜು 79844 ಮತ ಪಡೆದು ಗೆಲುವಿನ ಪತಾಕಿ ಹಾರಿಸಿದರೆ, 57939 ಮತಗಳನ್ನು ಪಡೆಯುವುದರ ಮೂಲಕ ದೇವರಾಜ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 37793 ಮತಗಳನ್ನು ಕೊಡುವ ಮೂಲಕ ನಾರಾಯಣಗೌಡ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ ಮತದಾರ.
ಬಿಜೆಪಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿ ಬಿ.ಶ್ರೀರಾಮುಲು ಕೂಡ ಸೋಲುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಗೆಲ್ಲುವ ಕುದುರೆ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ 103030 ಮತಗಳನ್ನು ಪಡೆಯುವ ಮೂಲಕ ಸೋಲಿನ ರುಚಿ ಉಣಿಸಿದ್ದಾರೆ. ಶ್ರೀರಾಮುಲು 74031 ಮತಗಳನ್ನು ಪಡೆಯುವ ಮೂಲಕ ಸೋತಿದ್ದಾರೆ.
ಅಲ್ಲದೇ ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ ಮಾಧುಸ್ವಾಮಿ, ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ, ಕನಕಪುರ ಕ್ಷೇತ್ರದಿಂದ ಆರ್.ಅಶೋಕ್ ಸೋತಿದ್ದಾರೆ. ಆರ್. ಅಶೋಕ್ ಕನಕಪುರದಿಂದ ಸೋತರೆ, ಪದ್ಮನಾಭನಗರ ಮತಕ್ಷೇತ್ರದಿಂದ ಗೆದ್ದಿದ್ದಾರೆ.
ಬೊಮ್ಮಾಯಿ ಸಂಪುಟದ ಸಚಿವರು
ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ
ಬಿ. ಶ್ರೀರಾಮುಲು – ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ
ವಿ. ಸೋಮಣ್ಣ – ವಸತಿ, ಮೂಲಸೌಕರ್ಯ ಇಲಾಖೆ
ಜೆಸಿ ಮಾಧುಸ್ವಾಮಿ – ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ
ಮುರುಗೇಶ್ ನಿರಾಣಿ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಡಾ. ಕೆ. ಸುಧಾರಕರ್ – ರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
ಎಂಟಿಬಿ ನಾಗರಾಜು – ಪೌರಾಡಳಿತ, ಸಣ್ಣ ಪ್ರಮಾಣದ ಕೈಗಾರಿಕೆಗಳು,
ನಾರಾಯಣ ಗೌಡ – ಯುವಜನ ಮತ್ತು ಕ್ರೀಡೆ, ರೇಷ್ಮೆ
ಬಿಸಿ ಪಾಟೀಲ್- ಕೃಷಿ
ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ
ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ