Connect with us

Bengaluru City

ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರ ನೇಮಕ: ಅಮಿತ್ ಶಾ ತಂತ್ರ ಏನು?

Published

on

ಬೆಂಗಳೂರು: 2018ರ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಇಬ್ಬರು ಕೇಂದ್ರ ಸಚಿವರನ್ನು ನೇಮಕಗೊಳಿಸಿದ್ದಾರೆ.

ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ, ಇಂಧನ ಸಚಿವ ಪಿಯೂಷ್ ಗೋಯಲ್ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಇಬ್ಬರು ಕೇಂದ್ರ ಮಂತ್ರಿಗಳ ಜೊತೆ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ನೇಮಕ ಮಾಡಿದ್ದು ಏಕೆ?
ರಾಜ್ಯ ಬಿಜೆಪಿ ನಾಯಕರ ಮೇಲೆ ವಿಶ್ವಾಸ ಕಡಿಮೆಯಾದ ಹಿನ್ನೆಲೆಯಲ್ಲಿ ಅಮಿತ್ ಶಾ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ನಾಯಕರುಗಳ ನಡುವಿನ ಸಮನ್ವಯತೆ ಕೊರತೆಯಿಂದ ಪಕ್ಷಕ್ಕೆ ಹೊಡೆತ ಬೀಳದೇ ಇರಲು ಸಚಿವರನ್ನು ನೇಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕಾಶ್ ಜಾವಡೇಕರ್, ಗೋಯಲ್ ಇಬ್ಬರು ಪಕ್ಷದ ಶಿಸ್ತಿನ ಸಿಪಾಯಿಗಳು, ಜೊತೆಗೆ ಇಬ್ಬರು ಕೇಡರ್ ಬೇಸ್ ನಾಯಕರುಗಳು, ಆರ್‍ಎಸ್‍ಎಸ್‍ಗೂ ಹತ್ತಿರವಾಗಿದ್ದು, ಯಾವುದೇ ಬಣಗಳಿಗೆ ಮಣಿಯುವದಿಲ್ಲ. ಪಕ್ಷದ ಸೂಚನೆ ಪಾಲನೆ ಮಾಡುವ ವಿಶ್ವಾಸ ಇರುವುದಿಂದಲೇ ಇವರನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ಉಸ್ತುವಾರಿಯನ್ನು ಇಬ್ಬರು ಸಚಿವರು ಹೊತ್ತಿದ್ದು, ಚುನಾವಣಾ ಉಸ್ತುವಾರಿಗಳ ನಿಯಂತ್ರಣದಲ್ಲಿ ರಾಜ್ಯ ಬಿಜೆಪಿ ಮುಂದೆ ಹೆಜ್ಜೆ ಹಾಕಲಿದೆ.

ಇದೇ ವೇಳೆ ಗುಜರಾತ್‍ಗೂ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ಬಿಜೆಪಿ ಹೈಕಮಾಂಡ್ ನೇಮಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮುಖ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕವಾಗಿದ್ದರೆ, ನಾಲ್ವರು ಕೇಂದ್ರ ಸಚಿವರನ್ನು ಸಹ ಉಸ್ತುವಾರಿಗಳನ್ನಾಗಿ ನೇಮಕಗೊಳಿಸಲಾಗಿದೆ.

ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಪಿ.ಪಿ. ಚೌಧರಿ, ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಗುಜರಾತ್ ಚುನಾವಣಾ ಸಹ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ!

ಇದನ್ನೂ ಓದಿ: ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ

 

Click to comment

Leave a Reply

Your email address will not be published. Required fields are marked *

www.publictv.in