ಮಂಡ್ಯ: ಮತಾಂತರಕ್ಕೆ (Conversion) ಒಪ್ಪದ ಅತ್ತೆ ಹಾಗೂ ಪತ್ನಿಯ ಮೇಲೆ ಪತಿ ಮತ್ತು ಆತನ ಕುಟುಂಬದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ಶ್ರೀರಂಗಪಟ್ಟಣದ (Srirangapatna) ಪಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯರನ್ನು ಲಕ್ಷ್ಮಿ ಹಾಗೂ ಆಕೆಯ ತಾಯಿ ಶೃತಿ ಎಂದು ಗುರುತಿಸಲಾಗಿದೆ. ಲಕ್ಷ್ಮಿಯ ಪತಿ ಶ್ರೀಕಾಂತ್ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಹಿಳೆಯ ಸಹೋದರ ರವಿಕಿರಣ್ ನೀಡಿದ ದೂರಿನ ಮೇಲೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ದೂರಿನಲ್ಲಿ, ಮತಾಂತರಕ್ಕೆ ಪೀಡಿಸಿ ಲಕ್ಷ್ಮಿಗೆ ನಿರಂತರ ಕಿರುಕುಳ ನೀಡಲಾಗಿದೆ. ಮತಾಂತರಕ್ಕೆ ಸಮ್ಮತಿಸದಿದ್ದಕ್ಕೆ ಕಿರುಕುಳ ನೀಡಿ, ತವರು ಮನೆಯಿಂದ ಹಣ ತರುವಂತೆ ಹಿಂಸೆ ಕೊಡುತ್ತಿದ್ದರು. ಅಕ್ಕನ ಸಂಸಾರ ಚೆನ್ನಾಗಿರಲಿ ಎಂದು 25 ಲಕ್ಷ ರೂ. ಹಣ ನೀಡಿದ್ದೇನೆ. ಅದೇ ಹಣದಲ್ಲಿ ಚರ್ಚ್ ಕಟ್ಟಿಸಿಕೊಂಡು ಆಮಿಷವೊಡ್ಡಿ ಜನರನ್ನ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೃತಿ, ಪಾಲಹಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳಿಗಿಂದಲೂ ನಿರಂತರವಾಗಿ ಮತಾಂತರ ನಡೆಯುತ್ತಿದೆ. ಒಕ್ಕಲಿಗರು, ವಿಶ್ವಕರ್ಮ ಜನಾಂಗ, ಮರಾಠಿಗಳು ಸೇರಿ ಸಿಕ್ಕವರನ್ನೆಲ್ಲ ಮತಾಂತರ ಮಾಡುತ್ತಾ ಬಂದಿದ್ದಾರೆ. ಕಷ್ಟದಲ್ಲಿ ಇರುವವರನ್ನು ಟಾರ್ಗೆಟ್ ಮಾಡಿ ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಾರೆ. ಎಲ್ಲಿಂದಲೋ ಅವರಿಗೆ ಫಂಡ್ ಬರುತ್ತೆ, ಮತಾಂತರ ಆದವರಿಗೆ ಲಕ್ಷ ಲಕ್ಷ ಹಣ ಕೊಡುತ್ತಾರೆ. ರಾಜಿ ಪಂಚಾಯತಿಗೆ ಅಂತ ಕರೆದು ನನ್ನ ಹಾಗೂ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ಷ್ಮಿ ಹಾಗೂ ಶ್ರೀಕಾಂತ್‌ಗೆ 15 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ವರ್ಷ ಕಳೆದಂತೆ ಪತಿಯ ಕುಟುಂಬಸ್ಥರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಪತಿ ಮತಾಂತರವಾದರೂ ಲಕ್ಷ್ಮಿ ಮತಾಂತರಕ್ಕೆ ಒಪ್ಪಲಿಲ್ಲ. ನಾನು ಚಾಮುಂಡೇಶ್ವರಿ ಭಕ್ತೆ ನಾನು ಮತಾಂತರ ಆಗಲ್ಲ ಎಂದು ಹೇಳಿದ್ದಳಂತೆ. ಯಾವಾಗ ಮತಾಂತರಕ್ಕೆ ಒಪ್ಪಲಿಲ್ಲ ಅಂದಿನಿಂದ ಮನೆಯವರು ಕಿರುಕುಳ ಶುರುಮಾಡಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಹೆಂಡತಿಯನ್ನ ಮನೆಯಿಂದ ತವರು ಮನೆಗೆ ಕಳಿಸಲಾಗಿತ್ತು. ಈಗ ರಾಜಿ ಪಂಚಾಯಿತಿಗೆ ಕರೆಸಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.