ಕಿನ್ಶಾಸ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮಿಲಿಟರಿ ನ್ಯಾಯಾಲಯ ಶನಿವಾರ ಇಬ್ಬರು ವಿಶ್ವಸಂಸ್ಥೆಯ ತಜ್ಞರ ಹತ್ಯೆಗೈದ 51 ಜನರಿಗೆ ಮರಣದಂಡನೆ ವಿಧಿಸಿದೆ.
2017ರಲ್ಲಿ ಇಬ್ಬರು ಯುಎನ್ ತಜ್ಞರ ಹತ್ಯೆಯಾಗಿತ್ತು. ಈ ಹತ್ಯೆಗೆ ಸಂಬಂಧ ಪಟ್ಟ 50 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಹಲವರು ನ್ಯಾಯಾಲಯಕ್ಕೆ ಗೈರಾಗುತ್ತಿದ್ದು. ಈಗ ಕೋರ್ಟ್ ಬರೋಬ್ಬರಿ 51 ಮಂದಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2017ರಲ್ಲಿ ಸರ್ಕಾರ ಹಾಗೂ ಸ್ಥಳೀಯ ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕ ಮೂಲದ ಮೈಕೆಲ್ ಶಾರ್ಪ್ ಹಾಗೂ ಚಿಲಿ ಮೂಲದ ಝೈದಾ ಕ್ಯಾಟಲಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರು ಸಾವನ್ನಪ್ಪಿದ 16 ದಿನಗಳ ಬಳಿಕ 2017 ಮಾರ್ಚ್ 28ರಂದು ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್ ಉಗ್ರರ ಹತ್ಯೆ
2016ರಲ್ಲಿ ಸ್ಥಳೀಯ ಸಾಂಪ್ರದಾಯಿಕ ಮುಖ್ಯಸ್ಥ ಕಮುಯಿನಾ ನ್ಸಾಪು ಅವರ ಹತ್ಯೆಯ ಬಳಿಕ ಈ ಸಂಘರ್ಷ ಪ್ರಾರಂಭವಾಗಿತ್ತು. ಸಂಘರ್ಷದಲ್ಲಿ 3,400 ಜನರು ಪ್ರಾಣ ಬಿಟ್ಟಿದ್ದು, ಸಾವಿರಾರು ಜನರು ಊರು ಬಿಟ್ಟಿದ್ದರು. ಈ ವೇಳೆ ವಿಶ್ವಸಂಸ್ಥೆ ದೇಶದಲ್ಲಿ ಶಾಂತಿ ಸ್ಥಾಪಿಸಲು ಶಾಂತಿಪಾಲನ ಪಡೆಯ ಜೊತೆ ತಜ್ಞರನ್ನು ಕಳುಹಿಸಿಕೊಟ್ಟಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ
ವಿಶ್ವಸಂಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರು ಯುಎನ್ ತಜ್ಞರ ಹತ್ಯೆಗೈಯಲಾಗಿತ್ತು. ಶಿಕ್ಷೆ ಒಳಗಾದವರ ಪೈಕಿ 22 ಮಂದಿ ಪರಾರಿಯಾಗಿದ್ದಾರೆ.