ದಿಸ್ಪುರ್: `ನಾನು ಯಾವಾಗಲೂ ಉಲ್ಫಾ-ಐ ಗುಂಪನ್ನು ಬೆಂಬಲಿಸುತ್ತೇನೆ. ಉಲ್ಫಾ-ಐ ಮತ್ತು ಗುಂಪಿನ ನಾಯಕ ಪರೇಶ್‌ಗಾಗಿ ನನ್ನ ಪ್ರಾಣವನ್ನೂ ಅರ್ಪಿಸಲು ಸಿದ್ಧನಿದ್ದೇನೆ’ ಎಂದು ಫೆಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ 22 ವರ್ಷದ ವಿದ್ಯಾರ್ಥಿಯೊಬ್ಬನನ್ನು ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ.
ಉಲ್ಫಾ-ಐ ಭಯೋತ್ಪಾದಕ ಗುಂಪನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ತಂಗ್ಲಾ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಕಲಿತಾ (22)ನನ್ನು ಅಸ್ಸಾಂನ ಉದಲ್ಗುರಿ ಜಿಲ್ಲಾ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು
ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದ ವಿದ್ಯಾರ್ಥಿ ಹಾಗೂ ಉದಲಗುರಿಯ ಬೋರಂಗಬರಿಯ ನಿವಾಸಿ `ಉಲ್ಫಾ-ಐ ಮತ್ತು ಗುಂಪಿನ ನಾಯಕ ಪರೇಶ್ ಬರುವಾಗಾಗಿ ನನ್ನ ಪ್ರಾಣ ಅರ್ಪಿಸಲೂ ಸಿದ್ಧನಿದ್ದೇನೆ. ನಾನು ಯಾವಾಗಲೂ ಉಲ್ಫಾವನ್ನು ಬೆಂಬಲಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾನೆ.
ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಬಂಧಿಸುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದರಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಆತ ಭಯೋತ್ಪಾದಕ ಗುಂಪಿನ ಸದಸ್ಯನಾಗಿರಲಿಲ್ಲ. ಆದರೆ ಬಂಧನದಲ್ಲಿದ್ದರೂ ಉಲ್ಫಾ ಭಯೋತ್ಪಾದಕ ಗುಂಪಿನ ಪರವಾಗಿಯೇ ಇದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ
ಆರೋಪಿ ಕಲಿತಾ ವಿರುದ್ಧ IPC ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA)ಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಕಲೈಗಾಂವ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ 2 ತಿಂಗಳಲ್ಲಿ ಇದು ಅಸ್ಸಾಂನಲ್ಲಿ 2ನೇ ದೇಶದ್ರೋಹದ ಪ್ರಕರಣವಾಗಿದೆ. ಮೇ 18ರಂದು 19 ವರ್ಷದ ವಿದ್ಯಾರ್ಥಿನಿ ಬರ್ಷಶ್ರೀ ಬುರಾಗೊಹೈನ್ ಭಯೋತ್ಪಾದಕ ಸಂಘಟನೆ ಬೆಂಬಲಿಸಿದ್ದಕ್ಕಾಗಿ ದೇಶದ್ರೋಹ ಪ್ರಕರಣದ ಅಡಿ ಬಂಧಿಸಲಾಗಿದೆ. ಈಗ ಆಕೆ ಜಾಮೀನು ಅರ್ಜಿ ಸಲ್ಲಿಸಿದ್ದು ಇದೇ ಜುಲೈ 21ರಂದು ಗುವಹಾಟಿ ಹೈ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.