ಗುವಾಹಟಿ: ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಮೃತ ವ್ಯಕ್ತಿಯ ಶವ ಹೊತ್ತು ಶವಸಂಸ್ಕಾರ ನಡೆಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಸ್ಸಾಂ ರಾಜ್ಯದ ಜೋಹ್ರತಾ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ರೂಪ್‍ಜ್ಯೋತಿ ಕುರ್ಮಿ ಮಾನವೀಯತೆ ಮೆರೆದ ಶಾಸಕ. ಮರಿಯಾನಿ ನಗರದ ನಿವಾಸಿ ದಿಲೀಪ್ ದವೆ ಎಂಬವರು ಸಾವನ್ನಪ್ಪಿದ್ದರು. ದಿಲೀಪ್ ಅವರಿಗೆ ಕೇವಲ ಒಬ್ಬ ಅಂಗವಿಕಲ ಮಾತ್ರ ಸಂಬಂಧಿ ಇದ್ದರು. ಸ್ಥಳೀಯರು ಯಾರು ದಿಲೀಪ್ ಅಂತ್ಯ ಸಂಸ್ಕಾರಕ್ಕೆ ಮುಂದಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ರೂಪ್‍ಜ್ಯೋತಿ ಕುರ್ಮಿ, ಚಿತೆ ಸಿದ್ಧಪಡಿಸಲು ನೆರವಾಗಿದ್ದಲ್ಲದೇ ಅಂತ್ಯ ಸಂಸ್ಕಾರ ನಡೆಸಿಕೊಟ್ಟರು. ಇದಾದ 24 ಗಂಟೆಯ ಬಳಿಕ ಆಟೋ ರಿಕ್ಷಾ ಚಾಲಕರೊಬ್ಬರ ತಾಯಿಯ ಶವ ಸಂಸ್ಕಾರದಲ್ಲೂ ಭಾಗಿಯಾದ್ರು.
ಮರಿಯಾನಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ರೂಪ್ ಜ್ಯೋತಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜುಲೈ 2017ರಂದು ನ್ಯಾಷನಲ್ ಪಾರ್ಕ್ ಕಾಜಿರಂಗದ ಪರಿಸರದಲ್ಲಿ ಅತಿವೃಷ್ಟಿ ಉಂಟಾದಾಗ ಖುದ್ದು ಶಾಸಕರೇ 50 ಕೆ.ಜಿ ತೂಕದ ಅಕ್ಕಿಯ ಮೂಟೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರವಾಹ ಪೀಡಿತ ಸ್ಥಳಗಳಿಗೆ ತಲುಪಿಸಿದ್ದರು.
ಈ ಮೊದಲು ಮರಿಯಾನಿ ವಿಧಾನಸಭಾ ಕ್ಷೇತ್ರವನ್ನು ರೂಪ್‍ಜ್ಯೋತಿ ಅವರ ತಾಯಿ ರೂಪಂ ಕುರ್ಮಿ ಪ್ರತಿನಿಧಿಸುತ್ತಿದ್ದರು. ರೂಪಂ ಕುರ್ಮಿ ಅಸ್ಸಾಂನ ಆದಿವಾಸಿ ಜನಾಂಗದ ಮೊದಲ ಪದವೀಧರ ಮಹಿಳೆ ಅಂತಾ ಅನ್ನಿಸಿಕೊಂಡಿದ್ದಾರೆ.