ಬೆಂಗಳೂರು: ಚುನಾವಣೆಗೆ ಮೊದಲೇ ಅಸ್ಸಾಂ ಕಾಂಗ್ರೆಸ್‌ನಲ್ಲಿ (Assam Congress) ಆಪರೇಷನ್ ಕಮಲದ ಭೀತಿ ಎದುರಾಗಿದ್ದು 10 ಮಂದಿ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ (Bengaluru) ಬಂದಿದ್ದಾರೆ.
ಗುವಾಹಟಿಯಿಂದ ಬೆಂಗಳೂರಿಗೆ ತಡರಾತ್ರಿ ಆಗಮಿಸಿದ ಶಾಸಕರು ರಾಮನಗರ ಜಿಲ್ಲೆಯಲ್ಲಿರುವ ಬಿಡದಿಯ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ 7 ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಶಾಸಕರು ವಂಡರ್ ಲಾ ರೆಸಾರ್ಟ್‌ನಲ್ಲಿ (Wonderla Resort) ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.
ರೆಸಾರ್ಟ್‌ಗೆ ಆಗಮಿಸಿದ ಅಸ್ಸಾಂ ಶಾಸಕರನ್ನು ರಾಜ್ಯ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸ್ವಾಗತ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಅಸ್ಸಾಂ ಕಾಂಗ್ರೆಸ್‌ನ ವೀಕ್ಷಕರಾಗಿರುವ ಕಾರಣ ಶಾಸಕರು ಬಿಡದಿಗೆ ಆಗಮಿಸಿದ್ದಾರೆ. ಶಾಸಕರು ತಂಗಿರುವ ರೆಸಾರ್ಟ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ನಡುವೆ ಸಚಿವ ಸಂಪುಟ ವಿಸ್ತರಣೆ ಕೂಗು

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಚುನಾವಣೆಗೂ ಮೊದಲು ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.
ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಕಾಂಗ್ರೆಸ್ 42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಪಕ್ಷದಲ್ಲಿ ಬಿರುಗಾಳಿ ಎದ್ದಿದ್ದು ಕೆಲ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿಯಿದೆ.
ಈಗಾಗಲೇ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭೂಪೇನ್ ಬೋರಾ ಜೊತೆಗೆ ಕಾಂಗ್ರೆಸ್ ನಾಯಕರಾದ ಸಂಜು ಬೋರಾ, ರಾಜೇಶ್ ಕುಮಾರ್ ಜೋಷಿ, ಕಂಗನ್ ದಾಸ್, ಗಗನ್ ಚಂದ್ರ ಬೊರಾ ಸೇರಿದಂತೆ ವಿರೋಧ ಪಕ್ಷದ ಹಲವರು ಬಿಜೆಪಿಗೆ ಸೇರ್ಪಡೆಯಾಗಿದ್ದರು.

