ಶ್ರೀನಿವಾಸ್ ಬಿವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಕಾಂಗ್ರೆಸ್ ಯುವ ನಾಯಕಿಗೆ ಗೇಟ್ ಪಾಸ್

Public TV
3 Min Read
ANGIKA DUTTA

ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಶ್ರೀನಿವಾಸ್ ಬಿ.ವಿ ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿದ್ದ ಅಸ್ಸಾಂ ಕಾಂಗ್ರೆಸ್ ತನ್ನ ಯುವ ಘಟಕದ ಮುಖ್ಯಸ್ಥೆ ಅಂಗಿತಾ ದತ್ತಾ (Angkita Dutta) ಅವರನ್ನು ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.

ಅಸ್ಸಾಂ (Assam) ಪ್ರದೇಶ ಕಾಂಗ್ರೆಸ್ ಸಮಿತಿಯು ದತ್ತಾ ಅವರ ಆರೋಪಗಳನ್ನು ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದೆ. ಪಕ್ಷ ಹಾಗೂ ಅದರ ನಾಯಕರ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ

ANGKITA DUTTA

ಯುವ ನಾಯಕಿ ಬುಧವಾರ ಶ್ರೀನಿವಾಸ್ ವಿರುದ್ಧ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗುರುವಾರ ಅಸ್ಸಾಂ ಪೊಲೀಸರ ಅಪರಾಧ ತನಿಖಾ ಇಲಾಖೆ (CID) ಅವರನ್ನು ಕರೆಸಿತ್ತು. ಈ ವೇಳೆ ಕಾಂಗ್ರೆಸ್ ನಾಯಕನನ್ನು ಕಾಮುಕ ಮತ್ತು ಕೋಮುವಾದಿ ಎಂದು ಅವರು ಆರೋಪಿಸಿದ್ದರು. ಆರೋಪದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವೂ ಅಸ್ಸಾಂ ಪೊಲೀಸರಿಗೆ ತನಿಖೆ ನಡೆಸುವಂತೆ ಹೇಳಿತ್ತು.

ಕಾಂಗ್ರೆಸ್, ಕರ್ನಾಟಕ ವಿಧಾನಸಭಾ ಚುನಾವಣೆಯವರೆಗೆ ಕಾಯುವಂತೆ ಅವರನ್ನು ಕೇಳಿಕೊಂಡಿತ್ತು. ಚುನಾವಣೆಯ ನಂತರ ಪಕ್ಷದ ಹೈಕಮಾಂಡ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ವಿಷಯವನ್ನು ಚರ್ಚಿಸುವುದಾಗಿ ಹೇಳಿತ್ತು. ಆದರೆ ಅವರು ಕಾಯದೇ ಪೊಲೀಸ್ ದೂರು ನೀಡಿದ್ದಾರೆ. ನಂತರ ಸಿಐಡಿವರೆಗೆ ವಿಚಾರವನ್ನು ತೆಗೆದುಕೊಂಡು ಹೋಗಿದ್ದಾರೆ. ಪಕ್ಷವು ಇದನ್ನು ಪಕ್ಷದ ಘನತೆಗೆ ಧಕ್ಕೆ ತರಲು ಎಂದು ಭಾವಿಸುತ್ತದೆ. ಶೋಕಾಸ್‍ಗೆ ಅವರ ಉತ್ತರವು ತೃಪ್ತಿಕರವಾಗಿಲ್ಲ ಎಂದು ಅಸ್ಸಾಂ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಹೇಳಿದ್ದಾರೆ.

ಯುವ ನಾಯಕಿಯ ದೂರಿನ ಆಧಾರದ ಮೇಲೆ ಸಿಐಡಿ (CID) ಶ್ರೀನಿವಾಸ್ ವಿರುದ್ಧ ಎಫ್‍ಐಆರ್ ದಾಖಲಿಸುವ ಸಾಧ್ಯತೆಯಿದೆ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

B.V SRINIVAS

ಐವೈಸಿ (IYC) ನಾಯಕ ವರ್ಧನ್ ಯಾದವ್ ಮೇಲೂ ಆರೋಪ ಮಾಡಿದ್ದು, ತಮ್ಮ ಲಿಂಗದ ಆಧಾರದ ಮೇಲೆ ತನ್ನ ವಿರುದ್ಧ ತಾರತಮ್ಯ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಲು ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಯುವ ನಾಯಕಿ ದೂರಿದ್ದರು.

ಈ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi ) ಸೇರಿದಂತೆ ಪಕ್ಷದ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಪಕ್ಷವು ಗುರುವಾರ ಆಕೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, 24 ಗಂಟೆಯೊಳಗೆ ಆಕೆಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿ ವಿವರಣೆ ಕೇಳಿತ್ತು.

ಮುಂಬರುವ ಚುನಾವಣೆಯಲ್ಲಿ (Election) ಕರ್ನಾಟಕ (Karnataka) ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವ ಶ್ರೀನಿವಾಸ್ ಅವರು ತಮ್ಮ ವಿರುದ್ಧ ಅಸಂಸದೀಯ ಮತ್ತು ಮಾನಹಾನಿಕರ ಪದಗಳನ್ನು ಬಳಸಿದ್ದಕ್ಕಾಗಿ ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಮತ್ತು ಆರೋಪಗಳನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಪ್ರಿಯಾಂಕಾ ಗಾಂಧಿಯವರ ಲಡ್ಕಿ ಹೂಂ ಲಾಡ್ ಸಕ್ತಿ ಹೂಂ (ನಾನು ಮಹಿಳೆ, ನಾನು ಹೋರಾಡಬಲ್ಲೆ) ಎಂಬ ಘೋಷಣೆಯನ್ನು ಪೊಳ್ಳು ಎಂದು ಕರೆದಿದೆ. ಇದು ಕಾಂಗ್ರೆಸ್ ಮಹಿಳಾ ಸಬಲೀಕರಣದ ಮಾದರಿಯಾಗಿದೆ ಎಂದು ಕುಟುಕಿದೆ. ಇದನ್ನೂ ಓದಿ: ಯಾವನ್ ರೀ ಅವನು ಪ್ರತಾಪ್ ಸಿಂಹ ಇಲ್ಯಾಕೆ ಬಂದು ಪ್ರಚಾರ ಮಾಡ್ತಿದ್ದಾರೆ : ಸಿದ್ದರಾಮಯ್ಯ ಕಿಡಿ

Share This Article