‘ಪ್ಲಾಸ್ಟಿಕ್ ಶುಲ್ಕ’ ಕಟ್ಟಿ ಉಚಿತವಾಗಿ ಓದಿ – ಶಾಲೆಯ ತಂತ್ರಕ್ಕೆ ಭಾರೀ ಮೆಚ್ಚುಗೆ

Public TV
2 Min Read
assam school

ಗುವಾಹಟಿ: ಪ್ಲಾಸ್ಟಿಕ್ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತಂದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ. ಆದರೆ ಅಸ್ಸಾಂನಲ್ಲಿರುವ ಶಾಲೆಯೊಂದು ವಿನೂತನ ರೀತಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ದಿಸ್‍ಪುರದ ಶಾಲೆಯೊಂದು ವಿದ್ಯಾರ್ಥಿಗಳು ಪ್ಲಾಸ್ಟಿಕ್ ನೀಡಿದರೆ ಶಾಲಾ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ ಎಂದು ಪ್ರಕಟಿಸಿದೆ. ತಮ್ಮ ಶಾಲೆಯ ವಿದ್ಯಾರ್ಥಿಗಳು ಶುಲ್ಕದ ಬದಲು ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಸಾಕು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

assam school b

ಏನಿದು ಪ್ಲಾಸ್ಟಿಕ್ ಶುಲ್ಕ:
ಶಾಲೆಯಲ್ಲಿರುವ ಒಟ್ಟು 110 ವಿದ್ಯಾರ್ಥಿಗಳು ಪ್ರತಿ ವಾರ 20 ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ನೀಡಬೇಕು. ಶಾಲೆಯ ಸೂಚನೆಯ ಪರಿಣಾಮ ವಿದ್ಯಾರ್ಥಿಗಳು ತಮ್ಮ ಮನೆಯ, ಗ್ರಾಮದ ಸುತ್ತಲು ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಶಾಲೆಗೆ ನೀಡುತ್ತಿದ್ದಾರೆ.

ಈ ಹಿಂದೆ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಶಾಲೆ ಈ ನಿಯಮವನ್ನು ರೂಪಿಸಿದೆ. ಮಕ್ಕಳಿಂದ ಶೇಖರಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ಪುನರ್ ಬಳಕೆ ಮಾಡಲು ಶಾಲಾ ಮಂಡಳಿ ನಿರ್ಧರಿಸಿದೆ. ಅಲ್ಲದೇ ಹೆಚ್ಚು ಪ್ಲಾಸ್ಟಿಕ್ ನೀಡಿದ ವಿದ್ಯಾರ್ಥಿಗಳಿಗೆ ಶಾಲೆಯೇ ಹಣವನ್ನು ನೀಡುತ್ತಿದೆ.

ಈ ಹಿಂದೆ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೆಂಕಿ ಇಟ್ಟು ಸುಡಲಾಗುತಿತ್ತು. ಈಗ ಈ ವಾಯುಮಾಲಿನ್ಯವನ್ನು ತಪ್ಪಿಸಲು ತ್ಯಾಜ್ಯಗಳನ್ನು ಬಳಸಿ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಇಟ್ಟಿಗೆಗಳನ್ನು ಶಾಲೆಯ ಕಟ್ಟಡ ನಿರ್ಮಾಣ ಹಾಗೂ ಸ್ಥಳೀಯ ಶೌಚಾಲಯಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಮಕ್ಕಳು ಪ್ಲಾಸ್ಟಿಕ್ ಹೆಕ್ಕುತ್ತಿರುವ ಕಾರಣ ಜನರಲ್ಲೂ ಈಗ ಜಾಗೃತಿ ಮೂಡಲು ಆರಂಭಗೊಂಡಿದೆ.

ಸ್ಥಳೀಯ ಮಕ್ಕಳು ಶಾಲೆಗೆ ಹೋಗದೇ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡಿ ದಿನಕ್ಕೆ 100 ರೂ. ನಿಂದ 150 ರೂ. ಸಂಪಾದಿಸುತ್ತಿದ್ದರು. ಈಗ ಪ್ಲಾಸ್ಟಿಕ್ ಶುಲ್ಕದಿಂದಾಗಿ ಅವರು ಶಾಲೆಗೆ ಸೇರ್ಪಡೆಯಾಗಿದ್ದಾರೆ.

girls school

ಮಕ್ಕಳಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸಿ ಉತ್ತಮ ಶಿಕ್ಷಣ ನೀಡಲು ಈ ಶಾಲೆಯನ್ನು 2016 ರಲ್ಲಿ ಆರಂಭಿಸಲಾಗಿದೆ. ಮಝೀನ್ ಅಖ್ತರ್ ಎಂಬವರು ಟಾಟಾ ಇನ್‍ಸ್ಟಿಟ್ಯೂಶನ್‍ನ ಎಂಎಸ್‍ಡಬ್ಲ್ಯು ವಿದ್ಯಾರ್ಥಿನಿ ಪರ್ಮಿತರನ್ನ ಭೇಟಿ ಮಾಡಿ ಅವರ ಸಹಾಯದೊಂದಿಗೆ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ವಯಸ್ಸಿನ ಆಧಾರದ ಮೇಲೆ ಶಿಕ್ಷಣ ನೀಡದೆ, ಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಲಾಗುತ್ತಿದೆ.

Share This Article