ಆಗ್ರಾ: 4 ಮಂದಿ ಯುವಕರು ಅಂಗಡಿಯೊಂದರಲ್ಲಿ 5 ರೂ. ಗುಟ್ಕಾ ಖರೀದಿಸಿ ಹಾಗೇಯೇ ಹೋಗುತ್ತಿದ್ದರು. ಆಗ ಅವರನ್ನು ತಡೆದು ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ, ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ದೀಪಕ್, ಟಿಕನ್ನಾ, ಫೌಜ್ದಾರ್, ಪೋಟಾ ಎಂದು ಗುರುತಿಸಲಾಗಿದೆ. ಮಾಧೋಪುರದ ಚೋಟು ಅಗರ್ವಾಲ್ ಗುಂಡೇಟು ತಿಂದ ಅಂಗಡಿ ಮಾಲೀಕ. ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಸುಮಾರು 9:30ರ ಹೊತ್ತಿಗೆ ಈ ಘಟನೆ ನಡೆದಿದೆ. ಚೋಟು ಅಂಗಡಿಗೆ ಬಂದ ಆರೋಪಿಗಳು 5 ರೂ. ಬೆಲೆಯ ಗುಟ್ಕಾವನ್ನು ಖರೀದಿಸಿದ್ದರು. ಆದರೆ ಹಣ ಕೊಡದೆ ವಾಪಾಸ್ ಆಗುತ್ತಿದ್ದ ವೇಳೆ ಅವರನ್ನು ತಡೆದ ಚೋಟು ಹಣ ಕೊಟ್ಟು ಹೋಗಿ ಎಂದನು. ಕೇವಲ 5 ರೂ. ವಿಚಾರಕ್ಕೆ ಸಿಟ್ಟಿಗೆದ್ದ ಯುವಕರು ಚೋಟುಗೆ ಹಿಗ್ಗಾಮುಗ್ಗ ಹೊಡೆದು, ಆತನ ಅಂಗಡಿಯ ಪೆಟ್ಟಿಗೆಯಲ್ಲಿದ್ದ 250 ರೂ. ಹಣವನ್ನು ದೋಚಿದ್ದರು.
ಈ ವೇಳೆ ಗಲಾಟೆ ಗಮನಿಸಿದ ಸ್ಥಳೀಯ ಅಮಿತ್ ಚೋಟು ಸಹಾಯಕ್ಕೆ ಬಂದಾಗ, ಯುವಕರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಚೋಟುಗೂ ಗುಂಡಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಸಾಯಿಸುತ್ತೇವೆ. ನಿನ್ನ ಕುಟುಂಬವನ್ನೂ ಕೊಲೆ ಮಾಡುತ್ತೇವೆ ಎಂದು ಅಮಿತ್‍ಗೆ ಬೆದರಿಕೆವೊಡ್ಡಿ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಆರೋಪಿಗಳು ಹೋದ ಬಳಿಕ ಗಂಭೀರ ಗಾಯಗೊಂಡಿದ್ದ ಚೋಟುವನ್ನು ಅಮಿತ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲು ಪೊಲೀಸರಿಗೆ ದೂರು ಕೊಡಲು ಹೆದರಿದ ಅಮಿತ್ ಬುಧವಾರ ಧೈರ್ಯ ಮಾಡಿ ಈ ಬಗ್ಗೆ ತಾಪ್ಪಲ್ ಪೊಲೀಸರ ಮುಂದೆ ಘಟನೆ ವಿವರಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, ಸೆಕ್ಷನ್ 394 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.