ಬೆಂಗಳೂರು: ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತರುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಇಲ್ಲೊಂದು ಚಿತ್ರತಂಡ ಈಗಾಗಲೇ ತನ್ನ ಚಿತ್ರೀಕರಣವನ್ನೆಲ್ಲಾ ಮುಗಿಸಿಕೊಂಡ ನಂತರ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಜೊತೆಗೆ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಕೂಡ ಬಿಡುಗಡೆ ಮಾಡಿದೆ. ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಈ 3 ಕಾರ್ಯಕ್ರಮಗಳಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಶಮನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹೆಸರು `ಆಸಿಂಕೋಜಿಲ್ಲ’. ನಿರ್ಮಾಪಕ ಭಾಮ ಹರೀಶ್ ಈ ಚಿತ್ರದ ಟೈಟಲ್ ಅನಾವರಣಗೊಳಿಸಿದರು. ಅಲ್ಲದೆ ನಟ ಸುಮಂತ್ ಶೈಲೇಂದ್ರ ಈ ಚಿತ್ರದ ಟ್ರೈಲರ್ ಗೆ ಚಾಲನೆ ನೀಡಿದರು. ಮಂಜುನಾಥ್ ಕೆ.ಸಿ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.
Advertisement
ಈ ಸಂದರ್ಭದಲ್ಲಿ ನಿರ್ದೇಶಕ ಶಮನ್ ಮಾತನಾಡುತ್ತಾ ಈ ಚಿತ್ರವನ್ನು ಡಿಫರೆಂಟಾಗಿ ಟ್ರೈ ಮಾಡಿದ್ದೇವೆ. ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಆ ಪ್ರಕ್ರಿಯೆಗೆ ಆತ ಕೊಡುವ ಹೆಸರೇ `ಆಸಿಂಕೋಜಿಲ್ಲ’. ಈ ಸಂದರ್ಭದಲ್ಲಿ ಆತನ ಜೊತೆಗೆ ಇನ್ನೂ ನಾಲ್ಕು ಜನ ವಿಶೇಷ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ. ಕಾಡಿನಲ್ಲಿ ಅವರಿಗೆ ಎದುರಾದ ಸಮಸ್ಯೆ ಏನು? ಅದರಿಂದ ಅವರು ಹೇಗೆ ಹೊರಬಂದರು? ಎಂಬುದನ್ನು ಆಸಿಂಕೋಜಿಲ್ಲ ಹೇಳುತ್ತದೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅಮೋಘವರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋಮಶೇಖರ್ ಶೆಟ್ಟಿ ಈ ಚಿತ್ರಕ್ಕೆ ಬಂಡಾವಳ ಹೂಡಿ ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಸೋಮಶೇಖರ ಶೆಟ್ಟಿ ಮಾತನಾಡುತ್ತಾ ಈ ಚಿತ್ರದ ಕಥೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲ ಹೊಸಬರಾದರು ಹೊಸದಾಗಿ ಪ್ರಯತ್ನ ಮಾಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
Advertisement
Advertisement
ವಿಷ್ಣು ತೇಜ, ಪ್ರಶಾಂತ್, ತಾರಕ್ ಸೋನಮ್ ರಾಯ್, ಭಾನು ಪ್ರಿಯ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ವಿಷ್ಣು ತೇಜ ಮಾತನಾಡಿ ಈ ಹಿಂದೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದೆ ಇದು ನನ್ನ 2ನೇ ಚಿತ್ರ ಎಂದರೆ ಮತ್ತೊಬ್ಬ ನಟ ಪ್ರಶಾಂತ್ ಮಾತನಾಡಿ ಮುಂಗೋಪಿ ಯುವಕನ ಪಾತ್ರ ಸಿಸ್ಟಂನಲ್ಲಿ ಬದಲಾವಣೆ ತರಲು ಹೋಗಿ ಏನೇನೆಲ್ಲಾ ಮಾಡುತ್ತಾನೆ ಅನ್ನೋದೆ ನನ್ನ ಪಾತ್ರ ಎಂದು ಹೇಳಿಕೊಂಡರು. ನಂತರ ನಟಿಯರಾದ ರಕ್ಷಿಕ, ಭಾನುಪ್ರಿಯ ಶೆಟ್ಟಿ ಹಾಗೂ ಸೋನಮ್ ರಾಯ್ ಕೂಡ ತಮ್ಮ ತಮ್ಮ ಪಾತ್ರಗಳ ಬಗ್ಗೆ ಚುಟುಕಾಗಿ ಹೇಳಿಕೊಂಡರು.