ಹುಬ್ಬಳ್ಳಿ: ಏಷ್ಯಾ ಖಂಡದಲ್ಲಿಯೇ ವಿಶಿಷ್ಟ ಮತ್ತು ವಿಭಿನ್ನವಾದ ನ್ಯಾಯಾಲಯ ಸಂಕೀರ್ಣವು ಭಾನುವಾರ ನಗರದ ವಿದ್ಯಾನಗರದ ತಿಮ್ಮ ಸಾಗರದಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.
ಭಾನುವಾರ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮೀಶ್ರಾರವರು ನೂತನ ನ್ಯಾಯಾಲಯ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಸೇರಿದಂತೆ 30 ನ್ಯಾಯಾಧೀಶರುಗಳು ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಟ್ಟಡದ ವಿಶೇಷತೆ ಏನು?
ಸುಮಾರು 5 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣಗೊಂಡಿದೆ. ನ್ಯಾಯಾಲಯದ ಕಟ್ಟಡವು ಒಟ್ಟು 7 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಕಟ್ಟಡವು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಒಟ್ಟು ಏಳು ಅಂತಸ್ತಿನ ಕಟ್ಟದಲ್ಲಿ ಮೊದಲೆರಡು ಅಂತಸ್ತುಗಳನ್ನು ನ್ಯಾಯಧೀಶರು ಹಾಗೂ ವಕೀಲರಿಗೆ ಪಾರ್ಕಿಂಗ್ ಗೆ ಮೀಸಲಿಡಲಾಗಿದೆ. ಮೊದಲ ಮಹಡಿಯಲ್ಲಿ ಹಾಲ್ ನಲ್ಲಿ ವಾದಿ- ಪ್ರತಿವಾದಿ ಹಾಗೂ ಸರಕಾರಿ ವಕೀಲರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ನ್ಯಾಯಾಧೀಶರ ಧ್ವನಿ ಕೇಳಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಸಂಪೂರ್ಣ ನ್ಯಾಯಾಲಯದ ಸಂಕೀರ್ಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿದೆ. ಪ್ರತಿ ಮಹಡಿಯಲ್ಲಿ 4 ನ್ಯಾಯಾಲಯ ಕಲಾಪದ ಸಭಾಂಗಣಗಳನ್ನು ಹೊಂದಿದೆ. ಅಲ್ಲದೇ ಕೈದಿಗಳಿಗೆ ಲಾಕಪ್ ಕೊಠಡಿ ಮತ್ತು ಕಕ್ಷಿದಾರರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ನ್ಯಾಯಾಲಯದಲ್ಲಿ ಒಟ್ಟು ಒಂದು ಸಾವಿರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ನಾಯಾಲಯದಲ್ಲಿ ಅತ್ಯಾಧುನಿಕ ಕ್ಯಾಂಟೀನ್ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಮಹಿಳೆಯರ ಅನುಕೂಲಕ್ಕಾಗಿ ಮಗುವಿಗೆ ಹಾಲುಣಿಸುವ ಕೊಠಡಿಯನ್ನು ಸಹ ನಿರ್ಮಿಸಲಾಗಿದೆ.
ಈ ಮೂಲಕ ದೇಶಮಾತ್ರವಲ್ಲದೇ ಏಷ್ಯಾದಲ್ಲಿಯೇ ವಿಶಿಷ್ಟ ಕೋರ್ಟ್ ಎನ್ನುವ ಹೆಸರಿಗೆ ಹುಬ್ಬಳ್ಳಿಯ ನ್ಯಾಯಾಲಯ ಪಾತ್ರವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews