ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan and Sri Lanka) ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ (AsiaCup 2023) ಟೂರ್ನಿಗೆ ಇಂದಿನಿಂದ ಚಾಲನೆ ದೊರೆತಿದೆ. ಪಾಕಿಸ್ತಾನ ಮುಲ್ತಾನ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯುತ್ತಿದ್ದು, ನೇಪಾಳ ಹಾಗೂ ಪಾಕ್ ತಂಡಗಳು ಕಣದಲ್ಲಿ ಕಾದಾಡುತ್ತಿವೆ. ಕಳೆದ ವರ್ಷ ಟಿ20 ಏಷ್ಯಾ ಕಪ್ ಟೂರ್ನಿಯಲ್ಲಿ ಸೂಪರ್ ಫೋರ್ ಹಂತದಲ್ಲೇ ಹೊರಬಿದ್ದಿದ್ದ ಟೀಂ ಇಂಡಿಯಾ (Team India) ಸಾಕಷ್ಟು ಟೀಕೆಗಳನ್ನ ಎದುರಿಸಿತ್ತು. ಈ ಬಾರಿ ಕಪ್ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದು, ರೋಹಿತ್ ಶರ್ಮಾ (Rohit Sharma) ನಾಯಕತ್ವಕ್ಕೂ ಇದು ಸವಾಲಾಗಿದೆ.
ಅಂದ ಹಾಗೆ ಏಷ್ಯಾ ಕಪ್ ಟೂರ್ನಿಯ ಇತಿಹಾಸದಲ್ಲಿಯೇ ಭಾರತ ತಂಡ ಅತ್ಯುತ್ತಮ ದಾಖಲೆಗಳನ್ನು ಹೊಂದಿದೆ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳಿಗಿಂತ ಭಾರತ ಏಷ್ಯಾ ಕಪ್ ಟೂರ್ನಿಯಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ತಿಳಿಯಬಹುದು. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್
Advertisement
Advertisement
ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಸಾಧನೆ ಏನು?
ಏಷ್ಯಾಕಪ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಸಾಧನೆ ಕೂಡ ಟೀಂ ಇಂಡಿಯಾ ಹೆಸರಿನಲ್ಲಿದೆ. ಭಾರತ ತಂಡ ಇಲ್ಲಿಯವರೆಗೂ 7 ಬಾರಿ (1984, 1988, 1991, 1995, 2010, 2016, 2018) ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. ಇದರಲ್ಲಿ 6 ಬಾರಿ ಏಕದಿನ ಪ್ರಶಸ್ತಿಗಳು ಹಾಗೂ ಒಂದು ಬಾರಿ ಟಿ20 ಸ್ವರೂಪದಲ್ಲಿ ಗೆಲುವು ಪಡೆದಿದೆ. 2012ರಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 330 ರನ್‌ಗಳ ಗುರಿಯನ್ನು ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ತಲುಪಿ ದಾಖಲೆಯ ಜಯ ಪಡೆದಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಮೂಲಕ ಅತಿಹೆಚ್ಚು ರನ್ ಚೇಸಿಂಗ್ ಮಾಡಿದ ದಾಖಲೆಯನ್ನೂ ಟೀಂ ಇಂಡಿಯಾ ಬರೆದಿದೆ.
Advertisement
Advertisement
ಏಷ್ಯಾಕಪ್ ಟೂರ್ನಿಯ ಒಂದು ಸುತ್ತು:
1984ರಿಂದ ಆರಂಭಗೊಂಡ ಏಷ್ಯಾಕಪ್ ಟೂರ್ನಿ ಇದೀಗ 16ನೇ ಆವೃತ್ತಿಗೆ ಕಾಲಿಟ್ಟಿದೆ. ಈವರೆಗೆ ಯುಎಇ 4 ಬಾರಿ, ಶ್ರೀಲಂಕಾ 4 ಬಾರಿ, ಬಾಂಗ್ಲಾದೇಶ 6 ಬಾರಿ, ಆತಿಥ್ಯ ವಹಿಸಿದೆ. ಭಾರತ ಈವರೆಗೆ ಒಂದೇ ಒಂದು ಬಾರಿಯೂ ಆತಿಥ್ಯ ವಹಿಲ್ಲ ಎಂಬುದು ಗಮನಾರ್ಹ. ಈವರೆಗೆ ನಡೆದ 15 ಆವೃತ್ತಿಗಳಲ್ಲಿ ಭಾರತ 7 ಬಾರಿ ಚಾಂಪಿಯನ್ 3 ಬಾರಿ ರನ್ನರ್ ಅಪ್, ಶ್ರೀಲಂಕಾ 6 ಬಾರಿ ಚಾಂಪಿಯನ್ 6 ಬಾರಿ ರನ್ನರ್ ಅಪ್ ಹಾಗೂ ಪಾಕಿಸ್ತಾನ 2 ಬಾರಿ ಚಾಂಪಿಯನ್ 3 ಬಾರಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿವೆ. ಬಾಂಗ್ಲಾದೇಶ ತಂಡ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಕೇವಲ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. 2018ರಲ್ಲಿ ಕೊನೆಯ ಬಾರಿಗೆ ಭಾರತ ಏಷ್ಯಾಕಪ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಅಂದು ಬಾಂಗ್ಲಾದೇಶದ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಪ್ರಶಸ್ತಿ ಬಾಚಿಕೊಂಡಿತ್ತು.
ಚೊಚ್ಚಲ ಟ್ರೋಫಿ ಗೆದ್ದ ಹಿರಿಮೆ ಭಾರತದ್ದು:
1975ರಿಂದಲೇ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಂಡಿತ್ತು. ಮೊದಲ ಎರಡು ಆವೃತ್ತಿಗಳಲ್ಲಿ 1975, 1979ರಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತು. 1983ರಲ್ಲಿ 3ನೇ ಆವೃತ್ತಿಗೆ ಭಾರತ ತಂಡ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಇದರ ಮರುವರ್ಷದಿಂದಲೇ ಏಷ್ಯಾಕಪ್ ಟೂರ್ನಿ ಆರಂಭಗೊಂಡು ಚೊಚ್ಚಲ ಆವೃತ್ತಿಯಲ್ಲೇ ಟೀಂ ಇಂಡಿಯಾ ಟ್ರೋಫಿ ಗೆದ್ದು ಇತಿಹಾಸ ನಿೃಮಿಸುವಲ್ಲಿ ಯಶಸ್ವಿಯಾಯಿತು. 1986ರಲ್ಲಿ ನಡೆದ 2ನೇ ಆವೃತ್ತಿಯಲ್ಲಿ ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ನಂತರ 1988, 1991, 1995ರಲ್ಲಿ ಸತತ ಮೂರು ಹ್ಯಾಟ್ರಿಕ್ ಟ್ರೋಫಿ ಗೆದ್ದ ಸಾಧನೆ ಮಾಡಿತು.
ಏಷ್ಯಾಕಪ್‌ನಲ್ಲಿ ರನ್ ಹೊಳೆ ಹರಿಸಿದ ಟಾಪ್-5 ಬ್ಯಾಟರ್ಸ್:
1. ಸುರೇಶ್ ರೈನಾ
ಭಾರತದ ಪರ ದಶಕಕ್ಕೂ ಹೆಚ್ಚು ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸ್ಫೋಟಕ ಬ್ಯಾಟರ್ ಸುರೇಶ್ ರೈನಾ, ಏಷ್ಯಾಕಪ್ ಟೂರ್ನಿಯಲ್ಲೂ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆದಿದ್ದರು. 2008ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ರೈನಾ, 6 ಪಂದ್ಯಗಳಿಂದ 110.38 ಸ್ಟ್ರೆಕ್ ರೇಟ್ ಹಾಗೂ 74.40 ಸರಾಸರಿಯಲ್ಲಿ 372 ರನ್ ಬಾರಿಸಿರುವುದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಅಂದಿನ ಆವೃತ್ತಿಯಲ್ಲಿ ರೈನಾ 1 ಶತಕ ಹಾಗೂ 2 ಅರ್ಧಶತಕಗಳನ್ನ ಸಿಡಿಸಿದ್ದರು.
2. ವಿರಾಟ್ ಕೊಹ್ಲಿ
ಈ ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಲು ಸಜ್ಜಾಗಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆದಿದ್ದ 2012ರ ಏಷ್ಯಾ ಕಪ್ ಟೂರ್ನಿಯಲ್ಲೂ ಸ್ಫೋಟಕ ಪ್ರದರ್ಶನ ತೋರಿದ್ದರು. ಆಡಿದ 3 ಪಂದ್ಯಗಳಲ್ಲಿ 2 ಶತಕ ಹಾಗೂ 1 ಅರ್ಧಶತಕದ ನೆರವಿನಿಂದ 119 ಸರಾಸರಿಯಲ್ಲಿ 357 ರನ್ ಬಾರಿಸಿದ್ದರು. ಕೊಹ್ಲಿಯ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. ಇದನ್ನೂ ಓದಿ: AsiaCup 2023, ವಿಶ್ವಕಪ್ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್ ಲುಕ್‌ನಲ್ಲಿ ಪಾಕ್ ತಂಡ
3. ವೀರೇಂದ್ರ ಸೆಹ್ವಾಗ್
ಪಾಕಿಸ್ತಾನ ಆತಿಥ್ಯದಲ್ಲಿ ನಡೆದಿದ್ದ 2008ರ ಏಷ್ಯಾ ಕಪ್ ಟೂರ್ನಿಯಲ್ಲಿ ಆರಂಭಿಕ ಆಟಗಾರನಾಗಿ ಬೆಂಕಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವೀರೇಂದ್ರ ಸೆಹ್ವಾಗ್, 5 ಪಂದ್ಯಗಳಿಂದ 69.60ರ ಸರಾಸರಿಯಲ್ಲಿ 348 ರನ್ ಚಚ್ಚಿದ್ದರು. ಸೆಹ್ವಾಗ್ ಅವರ ವೀರಾವೇಶದಿಂದ ಫೈನಲ್ ಹಂತ ತಲುಪಿದ್ದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತ್ತು.
4. ಶಿಖರ್ ಧವನ್
ಪಾಕಿಸ್ತಾನ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಯುಎಇಯಲ್ಲಿ ಆಯೋಜನೆಗೊಂಡಿದ್ದ 2018ನೇ ಸಾಲಿನ ಏಷ್ಯಾ ಕಪ್ ಟೂರ್ನಿಯಲ್ಲಿ 342 ರನ್ ಬಾರಿಸಿದ್ದರು. ಫೈನಲ್ ಪಂದ್ಯದಲ್ಲಿ 15 ರನ್ ಗಳಿಸಿದ್ದ ಧವನ್, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಬಾಂಗ್ಲಾದೇಶವನ್ನು 3 ವಿಕೆಟ್ ಗಳಿಂದ ಮಣಿಸಿದ ಟೀಂ ಇಂಡಿಯಾ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.
5. ಮಹೇಂದ್ರ ಸಿಂಗ್ ಧೋನಿ
ಟೀಂ ಇಂಡಿಯಾಗೆ ಮೂರೂ ಸ್ವರೂಪದಲ್ಲಿಯೂ ಐಸಿಸಿ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, 2008ನೇ ಸಾಲಿನ ಏಕದಿನ ಏಷ್ಯಾಕಪ್ ಟೂರ್ನಿಯಲ್ಲೂ ತಂಡವನ್ನು ಮುನ್ನಡೆಸಿದ್ದರು. ಆಡಿದ 6 ಪಂದ್ಯಗಳಿಂದ 91.34ರ ಸರಾಸರಿಯಲ್ಲಿ 1 ಶತಕ ಹಾಗೂ 2 ಅರ್ಧಶತಕ ನೆರವಿನಿಂದ 327 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲೂ ಧೋನಿ 49 ರನ್ ಗಳಿಸಿದ್ದರು. ಆದ್ರೆ ಈ ಆವೃತ್ತಿಯಲ್ಲಿ ಭಾರತ ತಂಡ 100 ರನ್ ಅಂತರದ ಸೋಲು ಕಂಡು ಪ್ರಶಸ್ತಿ ಗೆಲ್ಲುವ ಅವಕಾಶ ಕೈಚಿಲ್ಲಿಕೊಂಡಿತ್ತು.
Web Stories