ದುಬೈ: ಏಷ್ಯಾ ಕಪ್ (Asia Cup) ಫೈನಲ್ ಗೆದ್ದ ಬಳಿಕ ಸುಮಾರು 1 ಗಂಟೆಗಳ ಕಾಲ ದುಬೈ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಅಂತಿಮವಾಗಿ ಭಾರತ (Team India) ತಂಡಕ್ಕೆ ಟ್ರೋಫಿ ನೀಡದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಜುಗರ ಅನುಭವಿಸಿದರು.
ಮಧ್ಯ ರಾತ್ರಿ ಏನಾಯ್ತು?
ಮಧ್ಯರಾತ್ರಿ 12 ಗಂಟೆಯ ವೇಳೆಗೆ ಪಾಕ್ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು. ಜಯಗಳಿಸಿದ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಪೋಡಿಯಂನಲ್ಲಿ ಪ್ರಶಸ್ತಿಯನ್ನು ಸೂರ್ಯಕುಮಾರ್ ಸ್ವೀಕರಿಸುವುದಿಲ್ಲ ಬಿಸಿಸಿಐ ಎಸಿಸಿಗೆ ಹೇಳಿತು. ವೇದಿಕೆಯ ಮೇಲಿದ್ದ ಬೇರೆ ಗಣ್ಯರಿಂದ ಪ್ರಶಸ್ತಿಯನ್ನು ವಿತರಿಸುವಂತೆ ಮನವಿ ಮಾಡಿತು.
ಈ ವಿಚಾರವನ್ನು ಎಸಿಸಿ ನಖ್ವಿ ಬಳಿ ಹೇಳಿದಾಗ, ಪ್ರಶಸ್ತಿಯನ್ನು ನೀಡುವುದಾದರೆ ನಾನೇ ನೀಡುತ್ತೇನೆ. ಬೇರೆಯವರು ಪ್ರಶಸ್ತಿ ನೀಡಲು ನಾನು ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು. ಈ ವಿಚಾರದ ಬಗ್ಗೆ ಎಸಿಸಿ ಮತ್ತು ಪಿಸಿಬಿ ಮಧ್ಯೆ ದೊಡ್ಡ ಚರ್ಚೆ ನಡೆಯುತ್ತಲೇ ಇತ್ತು.
ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಕಾರಣ ಸಹ ಇದೆ. ಮೊದಲಿನಿಂದಲೂ ಭಾರತವನ್ನು ಕಟು ಪದಗಳಿಂದ ಟೀಕಿಸುತ್ತಿದ್ದ ನಖ್ವಿ ಏಷ್ಯಕಪ್‌ನಲ್ಲೂ ಟೀಂ ಇಂಡಿಯಾದ ವಿರುದ್ಧ ಕಿಡಿಕಾರಿದ್ದರು. ಈ ಕಾರಣಕ್ಕೆ ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತ್ತು.
ಇನ್ನೊಂದು ಕಡೆ ಸೋತ ಬಳಿಕ ಡ್ರೆಸ್ಸಿಂಗ್ ರೂಂ ಒಳಗಡೆ ಹೋದ ಪಾಕ್ ಆಟಗಾರರು ಹೊರಗೆ ಬರಲೇ ಇಲ್ಲ. ಇದರಿಂದಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ತಡವಾಯಿತು. ಪಂದ್ಯ ಮುಗಿದರೂ ಪ್ರಶಸ್ತಿ ವಿತರಣೆಯಾಗದ್ದಕ್ಕೆ ಕಮೆಂಟ್ರಿ ಹೇಳುತ್ತಿದ್ದ ರವಿಶಾಸ್ತ್ರಿ, ಪಂದ್ಯ ಮುಗಿದು 45 ನಿಮಿಷವಾಯಿತು. ಮೈದಾನದಿಂದ ಅಭಿಮಾನಿಗಳು ಹೊರ ಹೋಗುತ್ತಿದ್ದು, ಆಟಗಾರರು ಕಾಯುತ್ತಿದ್ದಾರೆ. ಏನು ನಡೆಯುತ್ತಿದೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: Asia Cup 2025 | ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್
ಅಂತಿಮವಾಗಿ ಸುಮಾರು 1 ಗಂಟೆಯ ನಂತರ ಪಾಕ್ ಆಟಗಾರರು ಮೈದಾನಕ್ಕೆ ಆಗಮಿಸಿದ ಬಳಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆರಂಭವಾಯಿತು. ಕುಲದೀಪ್ ಯಾದವ್, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಪ್ರಶಸ್ತಿಗಳನ್ನು ಸ್ವೀಕರಿಸಿದ ಬಳಿಕ ಪಾಕ್ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂತರ ಎರಡೂ ಕಡೆಯ ನಾಯಕರನ್ನು ಸೈಮನ್ ಡೌಲ್ ಕರೆಸಿ ಮಾತನಾಡಿದರು. ಕೊನೆಗೆ “ಭಾರತೀಯ ಕ್ರಿಕೆಟ್ ತಂಡವು ಇಂದು ರಾತ್ರಿ ತಮ್ಮ ಪ್ರಶಸ್ತಿಗಳನ್ನು ಪಡೆಯುವುದಿಲ್ಲ ಎಂದು ಎಸಿಸಿಯಿಂದ ನನಗೆ ತಿಳಿಸಲಾಗಿದೆ. ಹೀಗಾಗಿ ಇಲ್ಲಿಗೆ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮುಕ್ತಾಯವಾಗಲಿದೆ” ಎಂದು ಹೇಳಿದರು. ಬೆನ್ನಲ್ಲೇ ವೇದಿಕೆಯಲ್ಲಿದ್ದ ಗಣ್ಯರು ಮೈದಾನವನ್ನು ತೊರೆದರು. ನಖ್ವಿ ತೊರೆಯುತ್ತಿದ್ದಂತೆ ಎಸಿಸಿ ಅಧಿಕಾರಿಯೊಬ್ಬರು ಟ್ರೋಫಿಯನ್ನು ಎತ್ತಿಕೊಂಡು ಮೈದಾನದಿಂದ ಹೊರಹೋದರು. ಇದನ್ನೂ ಓದಿ: ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್
ಭಾರತೀಯ ತಂಡವು ಟ್ರೋಫಿಗಾಗಿ ಬಹಳ ತಾಳ್ಮೆಯಿಂದ ಕಾಯುತ್ತಿತ್ತು. ʼಚಾಂಪಿಯನ್ಸ್ʼ ಎಂದು ಬರೆದ ಫಲಕವನ್ನು ಮೈದಾನದ ಸಿಬ್ಬಂದಿ ಎರಡು ಬಾರಿ ತಂದು ನಂತರ ಹಿಂದಕ್ಕೆ ತೆಗೆದುಕೊಂಡು ಹೋದರು. ಕಾರ್ಯಕ್ರಮ ಮುಗಿದ ಬಳಿಕ ಟ್ರೋಫಿ ಎತ್ತಿಕೊಂಡು ಹೋದರೂ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಇದ್ದು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಅಭಿಮಾನಿಗಳ ಬಳಿ ಹೋಗಿ ಕೈ ಎತ್ತಿ ವಿಜಯದ ನಗೆ ಬೀರುತ್ತಿದ್ದರು.
ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಪೋಡಿಯಂ ಹತ್ತಿ ಸೆಲ್ಫಿ ತೆಗೆಯತೊಡಗಿದರು. ನಂತರ ಉಳಿದ ಆಟಗಾರರು ಪೋಡಿಯಂ ಮೇಲೆ ಹತ್ತಿದರು. ಎಲ್ಲರೂ ಪೋಡಿಯಂನಲ್ಲಿ ಇರುವಾಗ ನಾಯಕ ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಅವರ ಐಕಾನಿಕ್ ಟಿ20 ವಿಶ್ವಕಪ್ 2024 ರ ನಡಿಗೆಯನ್ನು ಅನುಕರಿಸುತ್ತಾ ಕಾಲ್ಪನಿಕ ಟ್ರೋಫಿಯನ್ನು ಹಿಡಿದುಕೊಂಡು ತಂಡದ ಬಳಿ ಬಂದು ಕೈಯನ್ನು ಎತ್ತಿ ಟ್ರೋಫಿ ಎತ್ತಿದ್ದಂತೆ ಸಂಭ್ರಮಿಸಿದರು. ಈ ಸಂಭ್ರಮಾಚರಣೆಗೆ ಉಳಿದ ಆಟಗಾರರು ಜೊತೆಗೂಡಿದರು.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿಯನ್ನು ನೀಡದ್ದಕ್ಕೆ ಸೂರ್ಯಕುಮಾರ್ ಯಾದವ್ ಎಸಿಸಿಯನ್ನು ಟೀಕಿಸಿದರು. ನಾನು ಎಲ್ಲಿಯೂ ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸುವುದನ್ನು ನೋಡಿಲ್ಲ. ನಾವು ಬಹಳ ಕಷ್ಟಪಟ್ಟು ಚಾಂಪಿಯನ್ ಆಗಿದ್ದೇವೆ ಎಂದು ಹೇಳಿದರು. ಇದಕ್ಕೆ ಅಭಿಷೇಕ್ ಶರ್ಮಾ, ನಮಗೆ ಒಂದು ಟ್ರೋಫಿ ಸಿಕ್ಕಿದೆ. ಸೂರ್ಯ ತಂದು ಕೊಟ್ಟಿದ್ದು ನಾವು ಸಂಭ್ರಮಿಸಿದ್ದೇವೆ. ಆ ಟ್ರೋಫಿಯ ತೂಕದ ಮಹತ್ವ ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ನಖ್ವಿಗೆ ಟಾಂಗ್ ನೀಡಿದರು.
ಭಾರತದ ಬಿಸಿಸಿಐ ಪ್ರತಿನಿಧಿಗಳು ಫೈನಲ್ ಪಂದ್ಯ ವೀಕ್ಷಿಸಲು ದುಬೈಗೆ ಮೈದಾನಕ್ಕೆ ಬಂದಿರಲಿಲ್ಲ. ಭಾನುವಾರ ಬಿಸಿಸಿಐ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮಿಥುನ್ ಮನ್ಹಾಸ್ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಫೈನಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ವೇದಿಕೆಯಲ್ಲಿ ಬಿಸಿಸಿಐ ಪ್ರತಿನಿಧಿ ಇರಬೇಕಿತ್ತು. ಆದರೆ ಚುನಾವಣೆ ನೆಪದಲ್ಲಿ ಬಿಸಿಸಿಐ ಪ್ರತಿನಿಧಿಗಳು ನಿನ್ನೆ ದುಬೈ ಮೈದಾನದಲ್ಲಿ ಕಾಣಿಸದೇ ಫೈನಲ್ ಪಂದ್ಯದಿಂದ ಅಂತರವನ್ನು ಕಾಯ್ದುಕೊಂಡಿದ್ದರು.
𝗥𝗮𝘄 𝗘𝗺𝗼𝘁𝗶𝗼𝗻𝘀
Special Team 👌
Special Triumph 🙌
🎥 From Dressing Room to the Field of Play – Scenes right through the final moments before #TeamIndia completed a stunning win in #AsiaCup2025 #Final! 👍 👍 pic.twitter.com/P2hfjarLQl
— BCCI (@BCCI) September 29, 2025





