– ಬಿಸಿಸಿಐ ವಿರುದ್ಧ ಶಿವಸೇನೆ, ವಿಪಕ್ಷಗಳು ಕೆರಳಿ ಕೆಂಡ
ನವದೆಹಲಿ/ದುಬೈ: ಕಳೆದ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧವನ್ನು (Pahalgam Attack) ಯಾವೊಬ್ಬ ಭಾರತೀಯನೂ ಮರೆತಿಲ್ಲ. ಧರ್ಮ ಕೇಳಿ ಗುಂಡಿಟ್ಟು ಕೊಂದ ರಾಕ್ಷಸರ ನರಮೇಧಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಪ್ರವಾಸಿಗರ ಸ್ವರ್ಗದಲ್ಲಿ ಭಯಾನಕ ನರಮೇಧ ನಡೆಸಿ 26 ಜನರ ನೆತ್ತರು ಹರಿಸಿದ ಪಹಲ್ಗಾಮ್ ದುರಂತವನ್ನು ಭಾರತೀಯರು ಎಂದೂ ಮರೆಯುವುದಿಲ್ಲ. ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿ ಕಣ್ಣೀರ ಕೋಡಿ ಹರಿಸಿದ ನರರಾಕ್ಷಸರ ಅಟ್ಟಹಾಸ ಮರೆಯಲು ಸಾಧ್ಯವಿಲ್ಲ.
ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ (Operation Sindoor) ಬಳಿಕ ಇದೀಗ ಭಾರತ ಹಾಗೂ ಪಾಕಿಸ್ತಾನಗಳ (India Vs Pakistan) ನಡುವೆ ಹೈವೋಲ್ಟೇಜ್ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ದುಬೈ ಕ್ರೀಡಾಂಗಣದಲ್ಲಿ ಇಂದು ರಾತ್ರಿ 8 ಗಂಟೆಗೆ ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್ ಪಂದ್ಯ ಶುರುವಾಗಲಿದೆ. ಇಡೀ ದೇಶ ಪಾಕ್ ವಿರುದ್ಧ ಆಕ್ರೋಶಗೊಂಡಿರುವಾಗ ನಡೆಯುತ್ತಿರುವ ಭಾರತ – ಪಾಕ್ ಮಧ್ಯೆ ಕ್ರಿಕೆಟ್ ಪಂದ್ಯ ದೇಶದ ಜನರನ್ನು ರೊಚ್ಚಿಗೆಬ್ಬಿಸಿದೆ. ಇಂದಿನ ಪಂದ್ಯಕ್ಕೆ ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಬದ್ಧವೈರಿಗಳ ಕಾದಾಟಕ್ಕೆ ಬಹಿಷ್ಕಾರದ ಕೂಗು ಎದ್ದಿದೆ. ಬದ್ಧವೈರಿಗಳ ಮ್ಯಾಚ್‌ಗೆ ಬಾಯ್ಕಾಟ್ ಅಭಿಯಾನ ನಡೀತಿದೆ. ಭಾರತ-ಪಾಕಿಸ್ತಾನ ಪಂದ್ಯ ಬೇಡ ಅಂತ ತೀವ್ರ ಒತ್ತಾಯ ಕೇಳಿ ಬರುತ್ತಿದೆ. ಬಿಸಿಸಿಐ ವಿರುದ್ಧ ಶಿವಸೇನೆ (Shiv sena) ಹಾಗೂ ವಿಪಕ್ಷಗಳು ತೀವ್ರವಾಗಿ ಕೆಂಡವಾಗಿವೆ. ಇದನ್ನೂ ಓದಿ: ದುಬೈನಲ್ಲಿ ಇಂಡಿಯಾ-ಪಾಕ್ ಮ್ಯಾಚ್‌ನ ಟಿಕೆಟ್ ಅನ್ ಸೋಲ್ಡ್!
ಹಣದ ದುರಾಸೆಯೇ? 
ಪಹಲ್ಗಾಮ್‌ನಲ್ಲಿ ದುರಂತ ಯಾರ ಕಣ್ಣಿನಿಂದಲೂ ಮಾಸಿಲ್ಲ. ತಮ್ಮ ಪತ್ನಿಯರ ಮುಂದೆಯೇ ಗುಂಡಿಟ್ಟು ಕೊಂದ ಆ ಕ್ಷಣ ಮಾಸುವ ಮಾತೇ ಇಲ್ಲ. ಇಂತಹ ಘಟನೆ ನಡೆದ ಬಳಿಕವೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬೇಕಾ..? ರಕ್ತ ಮತ್ತು ಕ್ರಿಕೆಟ್ ಒಟ್ಟಿಗೆ ಹರಿಯಬಹುದೇ..? ಇದು ಹಣದ ದುರಾಸೆಯೋ..? ಟಿವಿ ಜಾಹಿರಾತಿಗಾಗಿಯೋ? ಅಥವಾ ಆಟಗಾರರ ಶುಲ್ಕವೋ ಎಂದು ವಿಪಕ್ಷಗಳು ಪ್ರಶ್ನೆಗಳ ಸುರಿಮಳೆಗೈದಿವೆ.
ರಕ್ತ ನೀರು ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಪಾಕ್ ಜೊತೆಗೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡು ಉಗ್ರರ ಪೋಷಣೆ ಮಾಡುವ ನಿಮ್ಮನ್ನು ಮಂಡಿಯೂರುವಂತೆ ಮಾಡುತ್ತೇವೆ ಎಂದು ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರದ ಮೂಲಕ ಭಾರತ ಉತ್ತರ ಕೊಟ್ಟಿತ್ತು. ಆದ್ರೆ ಈಗ ಭಯೋತ್ಪಾದಕ ದೇಶದ ಜೊತೆಗೆ ಕ್ರೀಡಾಸ್ಫೂರ್ತಿಗಾಗಿ ಕ್ರಿಕೆಟ್ ಆಡಲು ಬಿಸಿಸಿಐ ನಿರ್ಣಯಕೈಗೊಂಡಿದೆ. ಆದ್ರೆ ಜನ ಪಾಕ್ ಜೊತೆಗೆ ಕ್ರಿಕೆಟ್ ಬೇಡ, ದೇಶಕ್ಕಿಂತ ಕ್ರಿಕೆಟ್ ದೊಡ್ಡದಾ? ಎನ್ನುವ ಪ್ರಶ್ನೆ ಎತ್ತಿದ್ದಾರೆ. ಇದನ್ನೂ ಓದಿ: ಭಾರತ vs ಪಾಕ್ | 26 ಜೀವಗಳಿಗಿಂತ ಹಣಕ್ಕೆ ಅಷ್ಟೊಂದು ಮಹತ್ವವೇ? – ಅಸಾದುದ್ದೀನ್ ಓವೈಸಿ ಕಿಡಿ
ಮೋದಿ ಏಕೆ ಮೌನ?
ಪಾಕಿಸ್ತಾನದ ಜೊತೆಗೆ ಭಾರತದ ಪಂದ್ಯ ಆಡುವುದಾದ್ರೆ ಇದು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಮಾಡಿದ ಅಪಮಾನ ಎಂದು ಶಿವಸೇನೆ, ವಿಪಕ್ಷಗಳು ಕಿಡಿಕಾರಿವೆ. ದೇಶದ ವಿಚಾರದಲ್ಲಿ ಬಿಜೆಪಿ ತನ್ನ ತತ್ವ ಸಿದ್ಧಾಂತ ಬದಲಿಸಿತಾ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇತ್ತ ಆಪರೇಷನ್ ಸಿಂಧೂರ ಹೆಸರಲ್ಲಿ ಅಬ್ಬರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದಾದ್ರೂ ಯಾಕೆ? ಎಂದು ವಾಗ್ದಾಳಿ ನಡೆಸಿದ್ದಾರೆ. ಶತ್ರು ರಾಷ್ಟ್ರದ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡುವುದಕ್ಕೆ ಬಿಜೆಪಿ, ಬಿಬಿಸಿಐ ವಿರುದ್ಧ ಶಿವಸೇನೆ ಕಿಡಿಕಾರಿದೆ. ಇನ್ನು ಹೋಟೆಲ್‌ಗಳಲ್ಲಿ ಭಾರತ-ಪಾಕ್ ಮ್ಯಾಚ್ ಪ್ರದರ್ಶನ ಮಾಡಿದ್ರೆ ದಾಳಿ ಮಾಡೋದಾಗಿ ಶಿವಸೇನೆ ಉದ್ಧವ್ ಠಾಕ್ರೆ ಬಣದ ಮುಖಂಡ ಎಚ್ಚರಿಕೆ ನೀಡಿದ್ದಾರೆ.
ರಕ್ತ ಹರಿಸಿದವರ ಜೊತೆಗೆ ಈಗ ಶಿಳ್ಳೆ ಚಪ್ಪಾಳೆ ಹೊಡೆದು ಕ್ರಿಕೆಟ್ ಆಟವನ್ನು ನೋಡೋದಾದ್ರೂ ಹೇಗೆ? ಅವರು ಗುಂಡು ಹೊಡೆದ್ರೂ ನಾವು ಮರೆತು ಕ್ರಿಕೆಟ್ ನೆಪದಲ್ಲಿ ಸ್ನೇಹದ ಹಸ್ತ ಚಾಚಬೇಕಾ? ಪಹಲ್ಗಾಮ್ ನರಮೇಧ, ಸೈನಿಕರ ಆಪರೇಷನ್ ಸಿಂಧೂರ, ನೆತ್ತರ ಪ್ರತೀಕಾರ ಎಲ್ಲವೂ ಹುಸಿಯಾಗಿ ಬಿಡ್ತಾ? ಅನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಆದ್ರೆ ಬಿಸಿಸಿಐ ಮಾತ್ರ ಯಾವ ಒತ್ತಡ, ವಿರೋಧ ಬಹಿಷ್ಕಾರಕ್ಕೆ ತಲೆಕಡೆಸಿಕೊಂಡಂತೆ ಕಾಣ್ತಿಲ್ಲ. ಪಂದ್ಯ ಬೇಡ ಅಂತ ಒತ್ತಾಯ, ರಾಜಕೀಯ ಒತ್ತಡ, ಬಾಯ್ಕಾಟ್ ನಡುವೆಯೂ ದುಬೈ ಕ್ರೀಡಾಂಗಣ ಇಂಡೋ ಪಾಕ್ ಕದನಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!
ಸೇಲ್ ಆಗದ ಟಿಕೆಟ್ 
ಇಂಡೋ-ಪಾಕ್ ಕದನ ಅಂದ್ರೆ ನೆಕ್ಸ್ಟ್ ಲೆವೆಲ್ ಕ್ರೇಜ್ ಇರುತ್ತೆ. ಆದ್ರೆ ಈ ಬಾರಿ ಸ್ಟೇಡಿಯಂ ಖಾಲಿ ಖಾಲಿ ಇರುತ್ತೆ ಎನ್ನುವಂತಾಗಿದೆ. ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗುತ್ತಿದ್ದ ಟಿಕೆಟ್ಸ್ ಇನ್ನೂ ಹಾಗೇ ಉಳಿದಿವೆ. ಟಿಕೆಟ್ ಬೇಡಿಕೆ ಕುಸಿದಿದೆ. ಇದೇ ದುಬೈನಲ್ಲಿ ಇದೇ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟಿಕೆಟ್ಸ್ ಜಸ್ಟ್ 15 ನಿಮಿಷದಲ್ಲಿ ಸೋಲ್ಡ್ ಔಟ್ ಆಗಿದ್ವು. ಏಷ್ಯಾಕಪ್ ಟಿಕೆಟ್ಸ್ ಇನ್ನೂ ಹಾಗೇ ಉಳಿದಿವೆ. ಬಾಯ್ಕಾಟ್ ಕ್ಯಾಂಪೇನ್ ಎಫೆಕ್ಟ್ ಟಿಕೆಟ್ ಮಾರಾಟದ ಮೇಲೆ ಬೀರಿದೆ.
 
					

 
		 
		 
		 
		 
		 
		 
		 
		 
		