CricketLatestLeading NewsMain PostSports

AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ

ದುಬೈ: ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದ ಶ್ರೀಲಂಕಾಗೆ ಆಘಾತವಾಗಿದೆ. ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲೇ ಶ್ರೀಲಂಕಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಅಫ್ಘಾನಿಸ್ತಾನದ ಎದುರು ಸೋಲನುಭವಿಸಿದೆ. ಉತ್ತಮ ಶುಭಾರಂಭ ನೀಡಿದ ಆಫ್ಘನ್‌ ತಂಡವು 8 ವಿಕೆಟ್‌ಗಳ ಸುಲಭ ಜಯ ಸಾಧಿಸಿ ಬೀಗಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ ಮೊದಲು ಲಂಕಾಗೆ ಬ್ಯಾಟಿಂಗ್‌ ಮಾಡುವ ಅವಕಾಶ ನೀಡಿತು. ಮೊದಲ ಪಂದ್ಯದಲ್ಲೇ ಅಬ್ಬರಿಸಲು ಮುಂದಾದ ಲಂಕಾ ಬ್ಯಾಟಿಂಗ್‌ ವೈಫಲ್ಯದಿಂದ 19.4 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 105 ರನ್‌ಗಳಿಸಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಆಫ್ಘನ್‌ 10.1 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ಗಳಿಸುವ ಮೂಲಕ ಸುಲಭ ಜಯ ಸಾಧಿಸಿತು.

ಟಾಸ್‌ ಗೆದ್ದು ನಂತರ ಬ್ಯಾಟ್‌ಮಾಡಿದ ಆಫ್ಘನ್‌ ತಂಡ ಉತ್ತಮ ಶುಭಾರಂಭ ನೀಡಿತು. ಆರಂಭಿಕರಾಗಿ ಕ್ರೀಸ್‌ಗಿಳಿದ ಹಜರತುಲ್ಲಾ ಝಝೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಆರಂಭದಿಂದಲೇ ಲಂಕಾ ವಿರುದ್ಧ ಅಬ್ಬರಿಸಲು ಶುರು ಮಾಡಿದರು. ಈ ವೇಳೆ ಹಜರತುಲ್ಲಾ ಝಝೈ 28 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು. ಮತ್ತೊಬ್ಬ ಆರಂಭಿಕನಾಗಿದ್ದ ರಹಮಾನುಲ್ಲಾ ಗುರ್ಬಾಜ್ ಕೇವಲ 18 ಎಸೆತಗಳಲ್ಲಿ 40 ರನ್‌(3 ಬೌಂಡರಿ, 4 ಸಿಕ್ಸರ್‌) ಚಚ್ಚಿ ಆಫ್ಘನ್‌ ತಂಡ ಗೆಲುವಿಗೆ ಕಾರಣರಾದರು. ನಂತರದಲ್ಲಿ ಬಂದ ಇಬ್ರಾಹಿಂ ಜದ್ರಾನ್ 13 ಎಸೆತಗಳಲ್ಲಿ 15 ರನ್‌ ಗಳಿಸಿ ಪೆವಿಲಿಯನ್‌ ಸೇರಿದರೆ ನಜೀಬುಲ್ಲಾ ಜದ್ರಾನ್ 2 ರನ್‌ಗಳಿಸಿ ಅಜೇಯರಾಗುಳಿದರು.

ಮಿಂಚಿದ ಬೌಲರ್‌ಗಳು:
ಆಫ್ಘಾನಿಸ್ತಾನ ಪರ ಫಾರೂಖಿ 3 ವಿಕೆಟ್ ಕಬಳಿಸಿ ಮಿಂಚಿದರು. ಮುಜೀಬ್ ಯಆರ್ ರೆಹಮಾನ್ 2 , ನಾಯಕ ಮೊಹಮ್ಮದ್ 2 ಹಾಗೂ ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿದರು.

ಟಾಸ್ ಸೋತು ಕ್ರೀಸ್‌ಗಿಳಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಆಫ್ಘಾನಿಸ್ತಾನ ಬೌಲರ್‌ಗಳು ಶಾಕ್ ನೀಡಿದರು. ಆಫ್ಘನ್ನಿನ ಫಜಲಾಖ್ ಫಾರೂಖಿ, ಮುಜೀಬ್ ಹಾಗೂ ನಬಿ ಬೌಲಿಂಗ್‌ ದಾಳಿಗೆ ರನ್‌ ಕಲೆಹಾಕುವಲ್ಲಿ ಲಂಕಾ ತಂಡ ಹೆಣಗಾಡಿತ್ತು. ಆದರೆ ಭಾನುಕಾ ರಾಜಪಕ್ಸೆ ಹಾಗೂ ಚಾಮಿಕ ಕರುಣಾರತ್ನೆ ಹೋರಾಟದಿಂದ ಶ್ರೀಲಂಕಾ 100 ರನ್ ಗಡಿ ದಾಟಿತು.

ಕುಸಾಲ್ ಮೆಂಡಿಸ್ ಕೇವಲ 2 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಚಾರಿತ್ ಅಸಲಂಕಾ ಡಕೌಟ್ ಆದರು. ಆರಂಭದಲ್ಲೇ ಫಾರೂಖಿ ಎರಡು ಪ್ರಮುಖ ವಿಕೆಟ್ ಕಬಳಿಸಿ ಆಫ್ಘಾನಿಸ್ತಾನಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟರು. ಪಥುಮ್ ನಿಸಾಂಕ 3 ರನ್ ಗೆ ಔಟಾದರು. ಶ್ರೀಲಂಕಾ 5 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಬಂದ ದಸೂನ್ ಗುಣತಿಲಕ 17 ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಭಾನುಕಾ ರಾಜಪಕ್ಸ ಹೋರಾಟ ನೀಡಿದರೆ, ಇತರ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಿದರು. ವಾನಿಂದು ಹಸರಂಗ 2 ರನ್‌ಗೆ ಔಟಾದರು. ಇತ್ತ ನಾಯಕ ದಸೂನು ಶನಕಾ ಸಹ ಡಕೌಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಚಾಮಿಕ ಕರುಣಾರತ್ನೆ ಹಾಗೂ ಭಾನುಕಾ ರಾಜಪಕ್ಸ ಲಂಕಾ ತಂಡಕ್ಕೆ ಆಸರೆಯಾದರು. ಭಾನುಕ 38 ರನ್ ಸಿಡಿಸಿದರೆ ಚಾಮಿಕಾ 31ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರ ಆಸರೆಯಿಂದ ಲಂಕಾ 19.4 ಓವರ್‌ಗಳಲ್ಲಿ 105 ರನ್‌ಗಳಿಸಿತು. ನಂತರದ ಬ್ಯಾಟರ್‌ಗಳು ಸ್ಥಿರವಾಗಿ ನಿಲ್ಲದ ಕಾರಣ ಲಂಕಾ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು.

Live Tv

Leave a Reply

Your email address will not be published.

Back to top button