ದುಬೈ: ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಬಲದಿಂದಾಗಿ ಕೊನೆಯ ವರೆಗೆ ಹೋರಾಡಿ ಪಾಕಿಸ್ತಾನ ತಂಡ ಭಾರತ ವಿರುದ್ಧ 6 ವಿಕೆಟ್‍ಗಳ ಜಯ ಸಾಧಿಸಿದೆ.
Advertisement
ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ 2 ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 26 ರನ್ ಬೇಕಾಗಿತ್ತು. ಕೊನೆಯ 6 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಭಾರತದ ಪರ ಕೊನೆಯ ಓವರ್ ಎಸೆಯಲು ಬಂದ ಹರ್ಷದೀಪ್ ಸಿಂಗ್ ಅವರ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. ಎರಡನೇ ಎಸೆತದಲ್ಲಿ 4 ರನ್ ಬಿಟ್ಟುಕೊಟ್ಟರು. ಕೊನೆಯ 4 ಎಸೆತದಲ್ಲಿ 2 ರನ್ ಬೇಕಾಗಿತ್ತು. ಈ ವೇಳೆ ಆಸಿಫ್ ವಿಕೆಟ್ ಪಡೆಯುವಲ್ಲಿ ಹರ್ಷದೀಪ್ ಸಿಂಗ್ ಯಶಸ್ವಿಯಾದರು. ಕೊನೆಯ 2 ಎಸೆತಗಳಲ್ಲಿ ಪಾಕ್ ಗೆಲುವಿಗೆ 2 ರನ್ ಬೇಕಾಗಿತ್ತು. ಅಂತಿಮವಾಗಿ ಭಾರತ ನೀಡಿದ 182 ರನ್‍ಗಳ ಬೃಹತ್ ಮೊತ್ತವನ್ನು ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿ ಗೆಲುವು ದಾಖಲಿಸಿತು.
Advertisement
Advertisement
ಪಾಕಿಸ್ತಾನ ತಂಡ ಚೇಸಿಂಗ್ ವೇಳೆ ನಾಯಕ ಬಾಬರ್ ಅಜಮ್ 14 ರನ್ (10 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆಗುವ ಮೂಲಕ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ಇವರ ಹಿಂದೆ ಫಖರ್ ಜಮಾನ್ 15 ರನ್ (18 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. 63 ರನ್‍ಗಳಿಗೆ ಪಾಕಿಸ್ತಾನ ತಂಡ 2 ವಿಕೆಟ್ ಕಳೆದುಕೊಂಡಿತು.
Advertisement
ಆ ಬಳಿಕ ಒಂದಾದ ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ನವಾಜ್ ಪಾಕಿಸ್ತಾನ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ಮೂರನೇ ವಿಕೆಟ್‍ಗೆ 73 ರನ್ (41 ಎಸೆತ) ಬಾರಿಸಿ ಬೇರ್ಪಟ್ಟಿತು. ಉತ್ತಮವಾಗಿ ಆಡುತ್ತಿದ್ದ ಮೊಹಮ್ಮದ್ ನವಾಜ್ 42 ರನ್ (20 ಎಸೆತ, 6 ಬೌಂಡರಿ, 2 ಸಿಕ್ಸ್) ಬಾರಿಸಿ ಕ್ಯಾಚ್ ನೀಡಿ ಹೊರ ನಡೆದರು. ಆದರೆ ಇನ್ನುಂದೆಡೆ ರಿಜ್ವಾನ್ ಮಾತ್ರ ಬೌಂಡರಿ, ಸಿಕ್ಸ್ ಮೂಲಕ ಭಾರತದ ಬೌಲರ್‍ಗಳಿಗೆ ಕಾಡಿದರು. ಪಾಕ್ ಗೆಲುವಿಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ರಿಜ್ವಾನ್ ಆಟ 71 ರನ್ (51 ಎಸೆತ, 6 ಬೌಂಡರಿ, 2 ಸಿಕ್ಸ್) ಕೊನೆಗೊಂಡಿತು.
ಬಳಿಕ ಪಾಕಿಸ್ತಾನಕ್ಕೆ ಖುಷ್ದಿಲ್ ಶಾ ಮತ್ತು ಆಸಿಫ್ ಒಂದಾಗಿ ಪಾಕ್ ಗೆಲುವಿಗೆ ಹೋರಾಡಿದರು. ಈ ವೇಳೆ ಹರ್ಷದೀಪ್ ಸಿಂಗ್ ಬಿಟ್ಟ ಕ್ಯಾಚ್ ಕೂಡ ಪಾಕಿಸ್ತಾನಕ್ಕೆ ನೆರವಾಯಿತು. ಅಂತಿಮವಾಗಿ ಪಾಕಿಸ್ತಾನ 1 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಪಾಕಿಸ್ತಾನ ತಂಡ ಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಹೊಡಿಬಡಿ ಆಟದ ಮೂಲಕ ಸೂಪರ್ ಡೂಪರ್ ಆರಂಭ ನೀಡಿದರು. ಮೊದಲ ವಿಕೆಟ್‍ಗೆ 54 ರನ್ (31 ಎಸೆತ) ಪೇರಿಸಿ, ಶರ್ಮಾ 28 ರನ್ (16 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ರಾಹುಲ್ 28 ರನ್ (20 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು.
ಬಳಿಕ ವಿರಾಟ್ ಕೊಹ್ಲಿಯ ಅಬ್ಬರ ಆರಂಭವಾಯಿತು. ಆದರೆ ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್ ಯಾದವ್ 13 ರನ್ (10 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗಿ ನಿರಾಸೆ ಮೂಡಿಸಿದರು. ಇವರ ಹಿಂದೆ ಪಂತ್ 14 ರನ್ (12 ಎಸೆತ, 2 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಪಾಂಡ್ಯ ಶೂನ್ಯ ಸುತ್ತಿದರು.
ಕೊಹ್ಲಿ ಏಕಾಂಗಿ ಹೋರಾಟ
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೊಹ್ಲಿ ಮಾತ್ರ ಪಾಕ್ ಬೌಲರ್‌ಗಳನ್ನು ಚೆಂಡಾಡಿದರು. ಉತ್ತಮ ಲಯದಲ್ಲಿ ಕಂಡುಬಂದ ಕೊಹ್ಲಿ ಪಾಕ್ ಬೌಲರ್‌ಗಳನ್ನು ಕೊನೆಯ ಓವರ್ ವರೆಗೆ ಎದುರಿಸಿ 60 ರನ್ (44 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ಕೊನೆಯ ಓವರ್‌ನಲ್ಲಿ ರನ್ ಔಟ್ ಆಗಿ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ರವಿ ಬಿಷ್ಣೋಯಿ ಸತತ 2 ಬೌಂಡರಿ ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು.
ಅಂತಿಮವಾಗಿ ಭಾರತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ಗಳಿಸಿತು. ಪಾಕ್ ಪರ ಶಾದಾಬ್ ಖಾನ್ 2 ವಿಕೆಟ್ ಪಡೆದರು. ನಸೀಮ್ ಶಾ, ಮೊಹಮ್ಮದ್ ಹಸನೈನ್, ಹಾರಿಸ್ ರೌಫ್ ಮತ್ತು ಮೊಹಮ್ಮದ್ ನವಾಜ್ ತಲಾ 1 ವಿಕೆಟ್ ಹಂಚಿಕೊಂಡರು.