ಬೆಂಗಳೂರು: ಮಗ ಕಾಣೆಯಾಗಿದ್ದರಿಂದ ನೊಂದ ಎಎಸ್‍ಐ ಅಧಿಕಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ಆಡುಗೋಡಿಯ ಸಿಎಆರ್ ವಿಭಾಗದ ಎಎಸ್‍ಐ ಅಧಿಕಾರಿ ದಯಾನಂದ್ ಆತ್ಮಹತ್ಯೆ ಶರಣಾದ ಅಧಿಕಾರಿ. ಇವರು ತಮ್ಮ ಕ್ವಾರ್ಟಸ್ ನಲ್ಲಿ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ದಯಾನಂದ್ ರ ಮಗ ಕಾಣೆಯಾಗಿದ್ದು, ಇದೂವರೆಗೂ ಆತನ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದ ದಯಾನಂದ್ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸದ್ಯ ದಯಾನಂದ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.