ಬಾಗಲಕೋಟೆ: ಇಬ್ಬರು ಪರಸ್ಪರ ಪ್ರೀತಿಸಿದ್ದು, ಇವರಿಗೆ ಜಾತಿ ಅಡ್ಡ ಬಂದಿಲ್ಲ ಮೇಲು ಕೀಳೆಂಬ ಅಂತಸ್ತು ಅಡ್ಡ ಬಂದಿಲ್ಲ. ಆದರೆ ಇವರ ಪ್ರೀತಿಗೆ ಓರ್ವ ಎಎಸ್‍ಐ ಅಡ್ಡ ಬಂದಿದ್ದಾನೆ.
ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ. ನನಗೆ ನೀನು, ನಿನಗೆ ನಾನು ಎಂದು ಕೈ ಕೈ ಹಿಡಿದು ಪ್ರೇಮಿಗಳ ಪ್ರಯಾಣ. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಎಸ್.ಪಿ ಕಚೇರಿ ಆವರಣದಲ್ಲಿ. ಹೌದು. ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂದು ಹೇಳುತ್ತಾರೆ. ಆದರೆ ಸಿನಿಮಾ ಹಾಡಿನಂತೆ ನಡೆದುಕೊಳ್ಳೋದು ಅಷ್ಟು ಸುಲಭವೇ ಖಂಡಿತ ಇಲ್ಲ ಬಿಡಿ.
Advertisement
Advertisement
ಅಂದಹಾಗೆ ಇಲ್ಲಿ ಕಾಣುತ್ತಿರುವ ಈ ಪ್ರೇಮಿಗಳ ಹೆಸರು ಸಾಬು ಗುಣದಾಳ ಮತ್ತು ಶೃತಿ ಬಿರಾದಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರ ನಿವಾಸಿಗಳು. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಪ್ರೇಮ ಇದೇ ಅಕ್ಟೋಬರ್ 16ರಂದು ಮದುವೆಯಲ್ಲಿ ಯಶಸ್ಸು ಕಂಡಿದೆ. ಆದರೆ ಪ್ರೀತಿ ತುಂಬಿದ ಈ ಪ್ರೇಮಿಗಳ ಎದೆಯಲ್ಲಿ ಈಗ ಭಯದ ಕಾರ್ಮೋಡ ಆವರಿಸಿದೆ.
Advertisement
Advertisement
ಶೃತಿ ಮೇಲ್ಜಾತಿಗೆ ಸೇರಿದ ಹುಡುಗಿಯಾಗಿದ್ದರೆ, ಸಾಬು ದಲಿತ ಸಮುದಾಯಕ್ಕೆ ಸೇರಿದ ಯುವಕ. ಶೃತಿ ತಂದೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಬೇರೆ. ಇವರ ಪ್ರೀತಿಯ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಶೃತಿ ತಂದೆ ಎಎಸ್‍ಐ ಬಸನಗೌಡ ಮತ್ತು ಕುಟುಂಬ ಇವರಿಗೆ ಜೀವ ಬೆದರಿಕೆ ಹಾಕುತ್ತಿದೆಯಂತೆ. ಇದರಿಂದ ರಕ್ಷಣೆ ಕೋರಿ ಈ ಜೋಡಿ ಬಾಗಲಕೋಟೆ ಎಸ್.ಪಿಯವರಿಗೆ ಮನವಿ ಮಾಡಿದ್ದಾರೆ.
ಶೃತಿ ಬಿಎಸ್‍ಸಿ ಕಲಿಯುತ್ತಿರುವಾಗಲೇ ನಗರದಲ್ಲಿ ಫೈನಾನ್ಸ್ ಕಂಪನಿ ವ್ಯವಹಾರ ಮಾಡುತ್ತಿರುವ ಸಾಬು ಜೊತೆ ಲವ್ ಆಗಿದೆ. ಸಾಬು ಕೂಡ ಬಿಬಿಎ ಪದವಿ ಓದಿದ್ದಾರೆ. ಇಬ್ಬರಲ್ಲೂ ಜಾತಿ-ಭೇದ ಮೀರಿದ ಪ್ರೇಮ ಅರಳಿ ನಿಂತಿದೆ. ಆದರೆ ಇವರ ಪ್ರೀತಿ ವಿಷಯ ತಿಳಿದ ತಂದೆ ಎಎಸ್‍ಐ ಬಸನಗೌಡ ಬಿರಾದಾರ ಮತ್ತು ಕುಟುಂಬ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದೆ.
ಅನ್ಯ ಜಾತಿ ಹುಡುಗನನ್ನು ಮದುವೆಯಾಗೋದಕ್ಕೆ ಅವಕಾಶ ಕೊಟ್ಟಿಲ್ಲ ಮೇಲಾಗಿ ಶೃತಿಯನ್ನು ತಮ್ಮದೇ ಸಮುದಾಯದ ಹುಡುಗನ ನೋಡಿ ಮದುವೆ ಮಾಡಲು ಮುಂದಾಗಿದ್ದಾರೆ. ಇದನ್ನರಿತ ಶೃತಿ ಮತ್ತು ಸಾಬು ಮನೆ ಬಿಟ್ಟು ಬಾಗಲಕೋಟೆ ನೊಂದಣಾಧಿಕಾರಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ.
ಶೃತಿ ತಂದೆ ಎಎಸ್‍ಐ ಬಸನಗೌಡ ಹುಡುಗನ ಮನೆಯವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರಂತೆ ಜೊತೆಗೆ ಮಗಳಿಗೆ ಅವನನ್ನು ಬಿಟ್ಟು ಮನೆಗೆ ಬಾ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ದಾರಿ ಕಾಣದ ಇವರು ಎಸ್‍ಪಿ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಮನವಿ ಆಲಿಸಿದ ಎಸ್‍ಪಿ ಸಿಬಿ ರಿಷ್ಯಂತ್ ಇಬ್ಬರು ವಯಸ್ಕರರು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ನೊಂದಣಿ ಮದುವೆ ಕೂಡ ಆಗಿದ್ದು ಯಾವುದೇ ತೊಂದರೆಯಿಲ್ಲ. ಅವರ ಮನವಿಯಂತೆ ಸೂಕ್ತ ರಕ್ಷಣೆ ಕೊಡುವ ಭರವಸೆ ನೀಡಿದ್ದಾರೆ.
ಶೃತಿ ಮತ್ತು ಸಾಬು ಇಬ್ಬರು ಮೂರು ವರ್ಷದಿಂದ ಪ್ರೀತಿಸುತ್ತಿದ್ದಾಗಿ ಹೇಳಿದ್ದಾರೆ. ಈಗ ಮದುವೆ ಕೂಡ ಆಗಿದೆ ಇಬ್ಬರು ವಯಸ್ಕರರಾಗಿದ್ದು ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬಹುದು. ಸದ್ಯ ರಕ್ಷಣೆಗಾಗಿ ಮನವಿ ಮಾಡಿದ್ದು, ಸೂಕ್ತ ರಕ್ಷಣೆ ನೀಡುತ್ತೇವೆ ಯಾವುದೇ ತೊಂದರೆಯಿಲ್ಲ ಎಂದು ಬಾಗಲಕೋಟೆ ಎಸ್.ಪಿ ರಿಷ್ಯಂತ್ ತಿಳಿಸಿದ್ದಾರೆ.
ಒಟ್ಟಾರೆ ಪ್ರೀತಿಗೆ ಗಡಿಯಿಲ್ಲ ವ್ಯಾಪ್ತಿಯಿಲ್ಲ ಎನ್ನುವಂತೆ ಈ ಪ್ರೇಮಿಗಳು ಕೂಡ ಜಾತಿ-ಭೇದ ಮೀರಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇವರ ಪ್ರೀತಿ ಮದುವೆಗೆ ತಂದೆ ವಿಲನ್ ಆಗಿದ್ದು ವಿಪರ್ಯಾಸ. ಏನೇ ಆಗಲಿ ತಂದೆ ಮನಸ್ಸು ಬದಲಿಸಿ ಇವರ ಪ್ರೀತಿಗೆ ಬೆದರಿಕೆ ನೀಡದೆ ಭದ್ರತೆ ನೀಡಬೇಕಾಗಿದೆ ಆಗಿದ್ದಾಗ ಮಾತ್ರ ಈ ಪ್ರೇಮಿಗಳು ನೆಮ್ಮದಿ ಜೀವನ ಮಾಡೋಕೆ ಸಾಧ್ಯ.