ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ (Gandhad Gudi) ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳು 28 ರಂದು ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿದೆ. ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗೆ ಗಂಧದ ಗುಡಿಗೆ ಏನೆಲ್ಲ ಶಕ್ತಿ ತುಂಬಬೇಕೋ ಆ ಕೆಲಸವನ್ನು ಪುನೀತ್ ಅವರ ಪತ್ನಿ ಅಶ್ವಿನಿ (Ashwini Puneeth) ಮಾಡುತ್ತಿದ್ದಾರೆ.
ಗಂಧದ ಗುಡಿ ವಿಚಾರವಾಗಿ ಪುನೀತ್ (Puneeth Rajkumar) ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿರುವ ಅಶ್ವಿನಿ ಅವರು, ಇದೇ ಮೊದಲ ಬಾರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಗಂಧದ ಗುಡಿಯ ಆಶಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹೇಳಿದ್ದಾರಂತೆ. ಹಾಗಾಗಿ ಈ ಡಾಕ್ಯುಮೆಂಟರಿ (Documentary) ಮಾದರಿ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ರಾಜ್‌ಕುಮಾರ್ ಧ್ವನಿಯನ್ನು (Voiceover) ಕೇಳಬಹುದಾಗಿದೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ
ಪ್ರಿ ರಿಲೀಸ್ ಇವೆಂಟ್‌ಗಾಗಿ ಈಗಿನಿಂದಲೇ ಬೆಂಗಳೂರಿನ ಅರಮನೆ ಮೈದಾನ ಸಿದ್ಧವಾಗುತ್ತಿದೆ. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರು ಈ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೇ, ಕನ್ನಡದ ಬಹುತೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ರಾಜ್ ಕುಟುಂಬ ಆಹ್ವಾನ ನೀಡಿದೆ.
ಗಂಧದ ಗುಡಿ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಅನೇಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ವೃತ್ತಿ ಜೀವನದಲ್ಲಿ ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದು ವಿಶ್ಲೇಷಿಸಿದ್ದಾರೆ. ನಾಡಿನ ಕಾಡು, ಜಲ ಸಂಪತ್ತು, ಜೀವ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಹೊಸ ಲೋಕವನ್ನೇ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಿಡಿದಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಕೊನೆ ಸಿನಿಮಾ ಇದಾಗಿದೆ.