ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ದಿ.ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಸಹ ನೇಹಾ (Neha) ಪರ ಧ್ವನಿ ಎತ್ತಿದ್ದಾರೆ. ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಅಶ್ವಿನಿಯವರು ತಮ್ಮ ಇನ್ಸ್ಟಾದಲ್ಲಿ, ನೇಹಾ ಹಿರೇಮಠ ಅವರ ಸಾವಿಗೆ ನ್ಯಾಯ ಸಿಗಲಿ ಎಂಬುದು ನಮ್ಮೆಲ್ಲರ ಆಶಯ. ಕಾನೂನಿನ ಅಡಿಯಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದು, #JusticeForNeha ಎಂಬ ಟ್ಯಾಗ್ ಬಳಸಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಶಿವಣ್ಣ ಸಹ ತಮ್ಮ ಎಕ್ಸ್ ಖಾತೆಯಲ್ಲಿ, ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದು ಬರೆದುಕೊಂಡಿದ್ದರು.
ನಟ ರಿಷಭ್, ರಕ್ಷಿತ್, ದರ್ಶನ್ ಹಾಗೂ ಅನುಶ್ರೀ ಸೇರಿದಂತೆ ಅನೇಕ ನಟ ನಟಿಯರು ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.
ಏನಿದು ಪ್ರಕರಣ? ಏ.18ರ ಗುರುವಾರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬಂದಿ ಅವಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.