ಅಪ್ಪು ಹುಟ್ಟು ಹಬ್ಬದ ನಿಮಿತ್ತ ಇಂದು ಮರುಬಿಡುಗಡೆಯಾದ ಜಾಕಿ ಸಿನಿಮಾವನ್ನು ನೋಡಲು ಥಿಯೇಟರ್ ಗೆ ಆಗಮಿಸಿದ್ದರು ಪುನೀತ್ ಪತ್ನಿ ಅಶ್ವಿನಿ. ಸಿನಿಮಾ ಮುಗಿದ ನಂತರ ಭಾವುಕರಾಗಿ ಚಿತ್ರಮಂದಿರದಿಂದ ಹೊರ ಬಂದರು. ಪುನೀತ್ ನಿಧನದ ನಂತರವೂ ಅವರನ್ನು ಅಭಿಮಾನಿಗಳು ಪ್ರೀತಿಸುತ್ತಿರುವ ರೀತಿಗೆ ಅಕ್ಷರಶಃ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು ಅಶ್ವಿನಿ.
ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಜಾಕಿ (Jackie) ಸಿನಿಮಾವನ್ನು ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್ ಮುಂದೆ ಆಳೆತ್ತರದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ಅಪ್ಪು (Puneeth Rajkumar) ಹುಟ್ಟು ಹಬ್ಬಕ್ಕೆ (Birthday) ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ದುನಿಯಾ ಸೂರಿ (Duniya Vijay) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.
ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು.
ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.
ಬರೀ ಸಿನಿಮಾ ಮಾತ್ರವಲ್ಲ ಎಂದಿನಂತೆ ಅವರ ಅಭಿಮಾನಿಗಳು ಅನ್ನ ಸಂತರ್ಪಣೆ, ಕಣ್ಣುದಾನ, ರಕ್ತದಾನದಂತಹ ಶಿಬಿರಗಳನ್ನು ಅಪ್ಪು ಸಮಾಧಿ ಬಳಿ ಮಾಡಲು ರೆಡಿ ಆಗುತ್ತಿದ್ದಾರೆ. ಅಂದು ಯುವ ಸಿನಿಮಾದ ಇವೆಂಟ್ ಕೂಡ ಇರಲಿದೆ.